ಸೋಮವಾರ, ಜನವರಿ 26, 2015

ಜಿಲ್ಲಾ ಸಂಸ್ಕೃತ ಸಮ್ಮೇಳನ


ನಮ್ಮ ಋಷಿಮುನಿಗಳ ಸಾವಿರಾರು ವರ್ಷದ ತಪಸ್ಸಿನ ಫಲವಾಗಿ ಹಿಂದೊಮ್ಮೆ ವಿಶ್ವಗುರು ಮಾನ್ಯತೆ ಪಡೆದಿದ್ದ ದೇಶ ನಮ್ಮದು. ಪ್ರಪಂಚದ  ಅತ್ಯಂತ ಪ್ರಾಚೀನ ಸಾಹಿತ್ಯವೆಂದರೆ ವೇದ-ಉಪನಿಷತ್ತುಗಳು,-ಎನ್ನುವುದು ಸರ್ವಮಾನ್ಯ. ಇವೆಲ್ಲಾ ಸಾಹಿತ್ಯವು ಇರುವುದು ಸಂಸ್ಕೃತ ಭಾಷೆಯಲ್ಲಿ. ನಮ್ಮ ದೇಶದಲ್ಲಿನ ಯೋಗಶಾಸ್ತ್ರ, ವಿಜ್ಞಾನ,ತರ್ಕಶಾಸ್ತ್ರ,ಲೋಹಶಾಸ್ತ್ರ, ಆರೋಗ್ಯಶಾಸ್ತ್ರ ಮುಂತಾದ  ಸಮಸ್ತ ಜ್ಞಾನವು ಸಂಸ್ಕೃತ ಭಾಷೆಯಲ್ಲಿಯೇ ಇತ್ತು. ನಮ್ಮ ದೇಶವು ಪರಕೀಯರ ಆಕ್ರಮಣಕ್ಕೆ  ಒಳಗಾದ ಸಂದರ್ಭದಲ್ಲಿ  ಇಂತಹ ಅಮೂಲ್ಯ ನಿಧಿಯಲ್ಲಿ ಹಲವನ್ನು ನಾವು ಕಳೆದುಕೊಂಡಿದ್ದೇವೆ. ಅಷ್ಟೇ ಅಲ್ಲ ಬ್ರಿಟಿಷರ ಆಡಳಿತದಲ್ಲಿ ನಾವು ಆಂಗ್ಲ ಸಂಸ್ಕೃತಿಯ ಅಂಧಾನುಕರಣೆ ಮಾಡುತ್ತಾ ಈ ಮಣ್ಣಿನ ಸಂಸ್ಕೃತಿಯ ಬಗ್ಗೆ ಉದಾಸೀನ ದೋರಣೆ ತಾಳಿದೆವು. ಅದರ ದುಷ್ಪರಿಣಾಮವೇ ಇಂದಿನ ನಮ್ಮ ದೇಶದ ದುಃಸ್ಥಿತಿ. ನಮ್ಮ ಇಂದಿನ ಸ್ಥಿತಿಯ ಬಗ್ಗೆ ಹೆಚ್ಚು ವಿವರಣೆ ಅಗತ್ಯವಿಲ್ಲ. ಎಲ್ಲಾ ನಾವು ನೋಡುತ್ತಿದ್ದೇವೆ.
ಆದರೆ ಪ್ರಶ್ನೆ ಇರುವುದು ನಮ್ಮ ದೇಶದ ಸ್ಥಿತಿ ಹೀಗೆಯೇ ಇರಬೇಕೇ? ಎಂಬುದು. ಆದರೆ ಹೀಗೆ ಇರಬೇಕಿಲ್ಲ. ನಮ್ಮ ದೇಶವನ್ನು ಮತ್ತೊಮ್ಮೆ ಅತ್ಯಂತ ಹೆಮ್ಮೆ ಪಡುವಂತೆ ಸುಸಂಸ್ಕೃತನಾಡನ್ನಾಗಿ ಮಾಡಲು ಸಾವಿರಾರು ಜನ ಸಮಾಜಸೇವಕರು ಅಹರ್ನಿಶಿ ಕಾರ್ಯಪ್ರವೃತ್ತರಾಗಿದ್ದಾರೆ.ಸಂಸ್ಕೃತವು ಇಂದಿನ ಕಂಪ್ಯೂಟರ್ ವಿಜ್ಞಾನಕ್ಕೆ ಅತ್ಯಂತ ಹೊಂದುವ ಭಾಷೆ-ಎಂದು ನಿರೂಪಿತವಾಗಿದೆ.  ಸಂಸ್ಕೃತವನ್ನು ಮತ್ತೊಮ್ಮೆ ಸಾಮಾನ್ಯ ಜನರ ಆಡುಭಾಷೆಯನ್ನಾಗಿ ಮಾಡಲು  ಸಂಸ್ಕೃತಭಾರತಿಯು ಪಣತೊಟ್ಟಿದೆ.
೧. ಸಂಸ್ಕೃತಭಾರತಿಯು ೧೯೮೧ ರಲ್ಲಿ ಆರಂಭಗೊಂಡು ದೇಶದ ೩೫೦೦ ಸ್ಥಾನಗಳಲ್ಲಿ ತನ್ನ ಚಟುವಟಿಕೆ ಹೊಂದಿದೆ.
೨. ಕೇವಲ ೧೦ ದಿನಗಳಲ್ಲಿ ಸಂಸ್ಕೃತದಲ್ಲಿ ಸರಳವಾಗಿ ಮಾತನಾಡಲು ಕಲಿಸುವ ಏಕೈಕ ಸಂಸ್ಥೆ.
೩. ೧,೨೫,೦೦೦ ಶಿಬಿರಗಳ ಮೂಲಕ ೯೦ಲಕ್ಷ ಜನರಿಗೆ ಸಂಸ್ಕೃತದಲ್ಲಿ ಮಾತನಾಡಲು ಕಲಿಸಿದೆ.
೪. ೩೫೦ ಕ್ಕೂ ಹೆಚ್ಚು ಸರಳ ಸಂಸ್ಕೃತ ಪುಸ್ತಕಗಳನ್ನು ಪ್ರಕಟಮಾಡಿದೆ
-:ಜಿಲ್ಲಾ ಸಂಸ್ಕೃತ ಸಮ್ಮೇಳನಗಳು:-
ಸಂಸ್ಕೃತವನ್ನು ದೇಶದ ಮೂಲೆಮೂಲೆಗೆ ತಲುಪಿಸುವ ಸಲುವಾಗಿ ದೇಶದಲ್ಲಿ ೫೦೮ ಜಿಲ್ಲಾ ಸಂಸ್ಕೃತ ಸಮ್ಮೇಳನಗಳು ನಡೆಯಲಿವೆ. ನಮ್ಮ ರಾಜ್ಯದಲ್ಲಿ ೩೦ ಜಿಲ್ಲಾಸಮ್ಮೇಳನಗಳು ನಡೆಯುತ್ತವೆ. ಕಳೆದ ೨೫ ವರ್ಷಗಳಿಂದ ಹಾಸನಜಿಲ್ಲೆಯಲ್ಲಿ ಸಂಸ್ಕೃತಭಾರತಿಯ ಕೆಲಸ ನಡೆಯುತ್ತಿದೆ. ನೂರಾರು ಸಂಸ್ಕೃತ ಸಂಭಾಷಣಾ ಶಿಬಿರಗಳು ನಡೆದಿವೆ. ರಾಜ್ಯದಲ್ಲಿಯೇ ಅತ್ಯಂತ ಯಶಸ್ವಿಯಾಗಿ  ಮೊದಲನೆಯ ಜಿಲ್ಲಾ ಸಂಸ್ಕೃತ ಸಮ್ಮೇಳನವನ್ನು ನಡೆಸಿದ ಜಿಲ್ಲೆ ನಮ್ಮದು. ಈ ಬಾರಿಯ ಸಮ್ಮೇಳನವನ್ನು ದಿನಾಂಕ ೨೪.೨.೨೦೧೪ ರಂದು ಹಾಸನದ ಎಸ್.ಆರ್.ಎಸ್ ಕಲ್ಯಾಣ ಮಂಟಪದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈಗಾಗಲೇ ಸಂಸ್ಕೃತಾಸಕ್ತ ಯುವಕರು ಜಿಲ್ಲೆಯಲ್ಲಿ ಸಂಪರ್ಕದ ಕೆಲಸವನ್ನು ಆರಂಭಿಸಿದ್ದಾರೆ.