ಶನಿವಾರ, ಡಿಸೆಂಬರ್ 31, 2011

ಬುಧವಾರ, ಡಿಸೆಂಬರ್ 7, 2011

ಸಂಸ್ಕೃತ ಭಾರತಿಯ ಹಾಸನ ನಗರ ಕಾರ್ಯಕರ್ತರ ಭೈಠ ಕ್

 ಸಂಸ್ಕೃತ ಭಾರತಿಯ ಹಾಸನ ನಗರ  ಕಾರ್ಯಕರ್ತರ ಭೈಠ ಕ್ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ದಿನೇಶ್ ಜಿ ಕಾಮತ್  ಅವರ  ಮಾರ್ಗದರ್ಶನದಲ್ಲಿ  ದಿನಾಂಕ ೭.೧೨.೨೦೧೧ ರಂದು ನಡೆಯಿತು. ಅದರ ಕೆಲವು ಫೋಟೋ ಗಳನ್ನು  ಮತ್ತು  ಚರ್ಚೆಯ ಧ್ವನಿ ಯನ್ನು ಇಲ್ಲಿ ಪ್ರಕಟಿಸಲಾಗಿದೆ. 











ಭಾನುವಾರ, ಮೇ 1, 2011

ಸಂಸ್ಕೃತ ಹಬ್ಬ


ನಿನ್ನೆ [೧.೫.೨೦೧೧] ಹಾಸನದ ಪೇಟೆಬೀದಿಗಳಲ್ಲಿ ಸಂಸ್ಕೃತದ ಹಬ್ಬ. ಸಂಸ್ಕೃತ ಭಾರತಿಯ ಪ್ರಾಂತ ಮಟ್ಟದ ಶಿಕ್ಷಕ ಪ್ರಶಿಕ್ಷಣ ವರ್ಗದ ಸಮಾರೋಪ ದಿನವಾದ ಅಂದು ನಗರದ ಹಾಸಾಂಬ ಪ್ರದೇಶ ಮತ್ತು ಪೇಟೆ ಬೀದಿಯಲ್ಲಿ ನಡೆದ ಶೋಭಾಯಾತ್ರೆಯು ಜನರ ಮೆಚ್ಚುಗೆ ಪಡೆಯಿತು. ಉತ್ಸಾಹದ ವಾತಾವರಣದಲ್ಲಿ ನಡೆದ ಶೋಭಾಯಾತ್ರೆಯ ಕೆಲವು ಚಿತ್ರಗಳು ಮತ್ತು ನಂತರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಶ್ರೀಮತೀ ಶಾಂತಾಶಾಸ್ತ್ರಿ, ಅವರ ಭಾಷಣದ ಧ್ವನಿಯನ್ನು ಇಲ್ಲಿ ಪ್ರಕಟಿಸಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಭಾಗವನ್ನು ಪ್ರಕಟಿಸಲಾಗುವುದು.













ಮಂಗಳವಾರ, ಏಪ್ರಿಲ್ 26, 2011

ಸಂಪ್ರದಾಯಗಳು ಸಂಕೋಲೆಗಳಾಗದಿರಲಿ



     ಕೈ ಹಿಡಿದ ಗಂಡ ಗತಿಸಿದರೆ ವಿಧವೆ ಪತ್ನಿ ಕೇಶ ಮುಂಡನ ಮಾಡಿಸಿಕೊಂಡು ಕೆಂಪು ಅಥವಾ ಬಿಳಿ ಸೀರೆ ಉಟ್ಟುಕೊಂಡು ಕೈಗೆ ಬಳೆ ಹಾಕಿಕೊಳ್ಳದೆ ಹಣೆಗೆ ಕುಂಕುಮ ಇಟ್ಟುಕೊಳ್ಳದೆ ಒಂದು ರೀತಿಯ ಒಂಟಿ ಹಾಗೂ ಬಲವಂತದ ವೈರಾಗ್ಯದ ಜೀವನ ನಡೆಸಬೇಕಾಗಿದ್ದ ಕಾಲವಿತ್ತು. ಚಿಕ್ಕ ವಯಸ್ಸಿನಲ್ಲೇ ವಿಧವೆಯಾದವರ ಪಾಡು ಅನುಭವಿಸಿದವರಿಗೇ ಗೊತ್ತು.  ಆಕೆಗೆ ಶುಭ ಕಾರ್ಯಗಳಲ್ಲಿ ಆಹ್ವಾನವಿರುತ್ತಿರಲಿಲ್ಲ. ಆಕೆ ಎದುರಿಗೆ ಬಂದರೆ ಅಪಶಕುನವೆಂದು ಭಾವಿಸುವವರಿದ್ದರು. ಹೊಸ ಪೀಳಿಗೆಯವರಿಗೆ ಇಂತಹ ಅನಿಷ್ಟ ಸಂಪ್ರದಾಯದ ಪರಿಚಯ ಇರಲಾರದು. ಪ್ರಾರಂಭದಲ್ಲಿ ಕೇಶಮುಂಡನ ಮಾಡಿಸಿಕೊಳ್ಳುವುದು ನಿಂತರೂ ಕೈಗೆ ಬಳೆ ಹಾಕಿಕೊಳ್ಳಲು, ಹಣೆಗೆ ಕುಂಕುಮ ಇಟ್ಟುಕೊಳ್ಳಲು ಹಿಂಜರಿಯುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ, ಸುಧಾರಣೆಯಾಗಿದೆ. ಕಳೆದ ಎರಡು-ಮೂರು ದಶಕಗಳಿಂದೀಚೆಗೆ ಈ ಸಂಪ್ರದಾಯದ ಆಚರಣೆ ಕಂಡು ಬರುತ್ತಿಲ್ಲ. ಒಂದು ಅನಿಷ್ಟ ಸಂಪ್ರದಾಯದ ಅಂತ್ಯವಾಗಿರುವುದು ಸಮಾಧಾನದ ಸಂಗತಿ.
     ಸಂಪ್ರದಾಯವೆಂದರೆ ತಲೆ ತಲಾಂತರಗಳಿಂದ ಆಚರಿಸಿಕೊಂಡು ಬರಲಾಗುವ ಆಚರಣೆಗಳು, ನಡವಳಿಕೆಗಳು. ಸರಿಯೋ, ತಪ್ಪೋ ವಿಚಾರ ಮಾಡದೆ ಅದನ್ನು ಮುಂದುವರೆಸಿಕೊಂಡು ಬರುವವರನ್ನು ಸಂಪ್ರದಾಯವಾದಿಗಳು ಎನ್ನುತ್ತಾರೆ. ಕೆಲವನ್ನು ಆಚರಿಸಿ ಕೆಲವನ್ನು ಕೈಬಿಡುವ ಅನುಕೂಲ/ಅವಕಾಶವಾದಿಗಳೂ ಇದ್ದಾರೆ. ಅರ್ಥವಿಲ್ಲದ ಸಂಪ್ರದಾಯಗಳನ್ನು ಧಿಕ್ಕರಿಸಿ ನಡೆಯುವವರೂ ಇದ್ದಾರೆ. ಸ್ವತಃ ಸಂಪ್ರದಾಯಗಳನ್ನು ಆಚರಿಸದಿದ್ದರೂ, ಅರ್ಥವಿಲ್ಲವೆಂದು ತಿಳಿದಿದ್ದರೂ, ಇತರರ ಸಲುವಾಗಿ ಅವನ್ನು ಬೆಂಬಲಿಸುವವರ ಸಂಖ್ಯೆ  ಸಹ ಗಣನೀಯವಾಗಿದೆ. ಪರಿಸ್ಥಿತಿಗೆ ಅನುಗುಣವಾಗಿ  ಎಲ್ಲರನ್ನೂ ಹೊಂದಿಸಿಕೊಂಡು, ಹೊಂದಿಕೊಂಡು ಸಮನ್ವಯ ಮಾಡಿ ಸದ್ವಿಚಾರ ತಿಳಿಸಲು ಹೆಣಗುವವರೂ ಇದ್ದಾರೆ. ಎಲ್ಲಾ ಸಂಪ್ರದಾಯಗಳೂ ಕೆಟ್ಟವಲ್ಲ; ಹಾಗೆಯೇ ಎಲ್ಲವೂ ಒಳ್ಳೆಯವು ಎಂದು ಹೇಳಲಾಗುವುದಿಲ್ಲ. ಯಾವ ಆಚರಣೆಗಳಿಂದ ಯಾರಿಗೂ ತೊಂದರೆಯಿಲ್ಲವೋ, ಯಾವುದರಿಂದ ಮನುಷ್ಯನ ಬೌದ್ಧಿಕ ವಿಕಾಸ, ಅಭಿವೃದ್ಧಿಗೆ ಸಹಕಾರವಾಗುವುದೋ, ಸಂತಸ ಹರಡುವುದೋ, ತಾರತಮ್ಯ ಇಲ್ಲದಿರುವುದೋ ಅಂತಹವುಗಳನ್ನು  ಒಳ್ಳೆಯ ಸಂಪ್ರದಾಯಗಳೆನ್ನಬಹುದು. ಇದಕ್ಕೆ ತದ್ವಿರುದ್ಧವಾದ ಸಂಪ್ರದಾಯಗಳನ್ನು ಕೆಟ್ಟವು ಎಂದುಕೊಳ್ಳಬಹುದು. ಒಳ್ಳೆಯದಕ್ಕೋ, ಕೆಟ್ಟದಕ್ಕೋ ಗೊತ್ತಿಲ್ಲ, ಈಗಂತೂ ಹೊಸ ಹೊಸ ಸಂಪ್ರದಾಯಗಳು, ಆಚರಣೆಗಳು ಚಾಲ್ತಿಗೆ ಬರುತ್ತಿವೆ, ಹಿಂದಿನ ಅನುಭವಗಳಿಂದ ಹೇಳುವುದಾದರೆ ಕ್ರಮೇಣ ಅವು ಗಟ್ಟಿಗೊಳ್ಳುತ್ತವೆ.
     ಬಾಲ ಗಂಗಾಧರನಾಥ ತಿಲಕರು ಬ್ರಿಟಿಷರ ವಿರುದ್ಧ ಜನರನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರೇಪಿಸುವ ಸಲುವಾಗಿ ಹುಟ್ಟುಹಾಕಿದ ಸಾರ್ವಜನಿಕ ಗಣೇಶ ಉತ್ಸವಗಳು ಇಂದು ಯಾವ ಮಟ್ಟಕ್ಕೆ ತಲುಪಿವೆ ಎಂಬುದು ವಿಚಾರ ಮಾಡಬೇಕಾದ ಸಂಗತಿಯಾಗಿದೆ. ಮೊದಲು ಊರಿಗೆ ಒಂದರಂತೆ ಇದ್ದುದು, ಈಗ ಗಲ್ಲಿ ಗಲ್ಲಿಗಳಲ್ಲಿ ಗಣೇಶನ ಮೂರ್ತಿಗಳನ್ನು ಇಟ್ಟು ಅಲ್ಲಿ ನಡೆಸುವ ಕಾರ್ಯಕ್ರಮಗಳು, ಪೈಪೋಟಿ, ವಂತಿಕೆ ವಸೂಲಿ, ವಿಸರ್ಜನೆ ಸಮಯದಲ್ಲಿ ಕುಡಿದು ಕುಣಿಯುವ ಯುವಕರು, ಮತೀಯ ಘರ್ಷಣೆಗಳು, ಇತ್ಯಾದಿಗಳನ್ನು ಗಮನಿಸಿದರೆ ಇವೆಲ್ಲಾ ಯಾವ ಪುರುಷಾರ್ಥಕ್ಕಾಗಿ ಎಂದು ಅನ್ನಿಸದೇ ಇರದು. ಒಳ್ಳೆಯ ರೀತಿಯಲ್ಲಿ ಆಚರಿಸುವವರು ಇದ್ದರೂ ಅಂತಹವರ ಸಂಖ್ಯೆ ಬೆರಳೆಣಿಕೆಯಷ್ಟು. ಗಣೇಶೋತ್ಸವಗಳು ಮುಗಿಯುವವರೆಗೂ ಶಾಂತಿ, ಸುವ್ಯವಸ್ಥೆಗಳಿಗಾಗಿ ಸಂಬಂಧಿಸಿದವರು ಹಗಲೂ ರಾತ್ರಿ ಹೆಣಗುವ, ಇಂತಹ ಉತ್ಸವಗಳು (ಗಣೇಶೋತ್ಸವ ಮಾತ್ರ ಅಲ್ಲ, ಎಲ್ಲಾ ಮತೀಯ/ಧಾರ್ಮಿಕ ಉತ್ಸವಗಳು ಸೇರಿ) ಏಕಾದರೂ ಬರುತ್ತವೋ ಎಂದು ಅಂದುಕೊಳ್ಳುವ ಪರಿಸ್ಥಿತಿ ಇಂದು ಇದೆ. ನಾನು ಗಣೇಶೋತ್ಸವವನ್ನಾಗಲೀ, ಇಂತಹ ಇತರ ಉತ್ಸವಗಳನ್ನಾಗಲೀ ವಿರೋಧಿಸುತ್ತಿಲ್ಲ, ಅದನ್ನು ಆಚರಿಸಲಾಗುತ್ತಿರುವ ರೀತಿಯ  ಬಗ್ಗೆ ಮಾತ್ರ ಬೆರಳು ತೋರಿಸುತ್ತಿದ್ದೇನೆ.
     ಸಂಕಷ್ಟಹರ ಗಣಪತಿ ಪೂಜೆಯನ್ನು  ಇಂದು ಸಾಮೂಹಿಕ ಸನ್ನಿಯಂತೆ ಆಚರಿಸಲಾಗುತ್ತಿದೆ. ಆದರೆ ಎಷ್ಟು ಜನರು ಇದನ್ನು ಶ್ರದ್ಧೆಯಿಂದ ಆಚರಿಸುತ್ತಿದ್ದಾರೆ? ಹೆಚ್ಚಿನವರು ಸ್ವಸಹಾಯ ಪದ್ಧತಿಯ ಹೋಟೆಲ್ಲಿನಲ್ಲಿ ಹಣ ಕೊಟ್ಟು ಕಾಫಿ ಕುಡಿದಂತೆ ದೇವಸ್ಥಾನಕ್ಕೆ ಹೋಗಿ ಹಣ ಕೊಟ್ಟು ಚೀಟಿ ಬರೆಸಿ ಹೋಗುತ್ತಾರೆ, ಪ್ರಸಾದ ಕೊಡುವ ಸಮಯಕ್ಕೆ ಬಂದು ಕೈಮುಗಿದು ಪ್ರಸಾದ ಪಡೆದು ಹೋಗುತ್ತಾರೆ. ಪೂಜೆಯ ಸಮಯದಲ್ಲಿ ದೇವಸ್ಥಾನದಲ್ಲಿದ್ದವರೂ ಪರಸ್ಪರ ಮಾತುಕತೆಗಳಲ್ಲಿ ತೊಡಗಿರುತ್ತಾರೆ. ಇಂತಹ ಆಚರಣೆಯಿಂದ ಯಾರಿಗೆ ಪ್ರಯೋಜನ? ಯಾರ ಕಷ್ಟಗಳು ಪರಿಹಾರವಾಗುತ್ತದೆ? ಶ್ರದ್ಧೆಯಿಂದ, ಅರ್ಥ ತಿಳಿದುಕೊಂಡು ಮಾಡುವ ಕ್ರಿಯೆಗಳಿಂದ ಮಾತ್ರ ಫಲ ಸಿಗಲು ಸಾಧ್ಯವಲ್ಲವೇ? ಇಲ್ಲದಿದ್ದರೆ ಅವು ತೋರಿಕೆಗೆ ಮಾಡುವ ಆಚರಣೆಗಳು ಅಷ್ಟೆ. ಇಸ್ಲಾಮ್ ಮತ ಪ್ರಾರಂಭವಾದ ಸಂದರ್ಭದಲ್ಲಿ ಧ್ವನಿವರ್ಧಕವಿರಲಿಲ್ಲ. ಆದರೆ ಇಂದು ಎಲ್ಲಾ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಧ್ವನಿವರ್ಧಿಸಿ ನಮಾಜು, ಉಪದೇಶಗಳನ್ನು ಮಾಡುತ್ತಿರುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಅದನ್ನು ಕೇಳಲು ಇಚ್ಛಿಸದವರಿಗೂ ಬಲವಂತವಾಗಿ ಕೇಳುವಂತೆ ಮಾಡುತ್ತಿರುವುದು ಒಂದು ರೀತಿಯ ಶಬ್ದಮಾಲಿನ್ಯವಲ್ಲವೇ?  
     ಜಾತ್ರೆ, ಪೂಜೆ, ಇತ್ಯಾದಿಗಳ ಹೆಸರಿನಲ್ಲಿ ದೇವರನ್ನು ಸಂತುಷ್ಟಗೊಳಿಸುವ(?) ಕಾರಣದಿಂದ ಪ್ರಾಣಿಬಲಿ ನೀಡುವ ಸಂಪ್ರದಾಯ ಒಳ್ಳೆಯದೆಂದು ಹೇಳಬಹುದೆ? ಇದನ್ನು ಸಮರ್ಥಿಸುವ ಜನರಿಗೆ ಕಡಿಮೆಯೇನಿಲ್ಲ. ಶಿಕಾರಿಪುರದಲ್ಲಿ ತಾಲ್ಲೂಕು ದಂಡಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಜಾತ್ರೆಯ ಸಮಯದಲ್ಲಿ ಕೋಣಬಲಿ ತಡೆಯಲು ಒಂದು ಗ್ರಾಮದಲ್ಲಿ  ಪೋಲಿಸರ ನೆರವಿನೊಂದಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದರೂ, ಗ್ರಾಮಸರಿಗೆ ಕಾನೂನಿನಲ್ಲಿ ಇರುವ ನಿಷೇಧ, ಉಲ್ಲಂಘಿಸಿದರೆ ಆಗುವ ಪರಿಣಾಮಗಳು, ಇತ್ಯಾದಿ ತಿಳುವಳಿಕೆ ಹೇಳಲು  ಮುಂಚಿತವಾಗಿ ನಡೆಸಿದ್ದ ಶಾಂತಿ ಸಮಿತಿ ಸಭೆಯಲ್ಲಿ ಪಶುವೈದ್ಯರ ಸಹಾಯದಿಂದ ಸಿರಿಂಜಿನಲ್ಲಿ ಕೋಣನ ರಕ್ತವನ್ನು ತೆಗೆದು ಸಾಂಕೇತಿಕವಾಗಿ ದೇವಿಗೆ ಅರ್ಪಿಸಲು ಗ್ರಾಮದ ಮುಖ್ಯಸರು ಒಪ್ಪಿ ಮುಚ್ಚಳಿಕೆ ಬರೆದುಕೊಟ್ಟಿದ್ದರೂ, ಪೋಲಿಸರ ಕಣ್ಗಾವಲು ಇದ್ದರೂ  ಎಲ್ಲರ ಕಣ್ಣುತಪ್ಪಿಸಿ ಕೋಣಬಲಿ ನೀಡಿದ ಪ್ರಸಂಗ ಬೇಸರ, ಮುಜುಗರ ಉಂಟುಮಾಡಿತ್ತು. ಎಲ್ಲಾ ಮಾಧ್ಯಮಗಳಲ್ಲೂ ವಿಷಯ ಅತಿರಂಜಿತವಾಗಿ ಪ್ರಚಾರಗೊಂಡಿತು. ಕೆಲವರ ಮೇಲೆ ಪ್ರಕರಣ ದಾಖಲಿಸಿದರೂ ರಾಜಕೀಯ ನಾಯಕರ ಮಧ್ಯಪ್ರವೇಶ ಪ್ರಕರಣವನ್ನು ದುರ್ಬಲಗೊಳಿಸಿದ್ದು ಸುಳ್ಳಲ್ಲ. ಈ ಪ್ರಕರಣವನ್ನು ರಾಜಕೀಯ ಮಾಡುವ ಸಲುವಾಗಿ ಪರವಾಗಿ ಮತ್ತು ವಿರೋಧವಾಗಿ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಬಳಸಿಕೊಂಡವು. ಅನಿಷ್ಟ ಸಂಪ್ರದಾಯಕ್ಕೆ ವಿರೋಧ ವ್ಯಕ್ತಪಡಿಸಿದವರೂ ಸಾತ್ವಿಕ ಕಾರಣಕ್ಕೆ ವಿರೋಧಿಸದೆ ವಿರೋಧಿಗಳನ್ನು ವಿರೋಧಿಸಲು ಮಾತ್ರ ಬಳಸಿದ್ದು ನೋವಿನ ವಿಷಯ. ಮಾಧ್ಯಮಗಳೂ ಕೆಸರೆರಚಾಟಕ್ಕೆ ಸಾಥ್ ನೀಡಿದವೇ ಹೊರತು, ಅವುಗಳಿಗೆ ಜನರಲ್ಲಿ ತಿಳುವಳಿಕೆ ಹೆಚ್ಚಿಸುವ ಶಕ್ತಿಯಿದ್ದರೂ ಮಾಡಲಿಲ್ಲ.  ಇಂತಹ ಉದಾಹರಣೆಗಳನ್ನು ಸಾಕಷ್ಟು ನೋಡಬಹುದು. ಅಂಧ ಸಂಪ್ರದಾಯಗಳ ಕುರಿತು ತಿಳಿಸುವ ಸಲುವಾಗಿ ಕೆಲವನ್ನು ಮಾತ್ರ ಸಾಂಕೇತಿಕವಾಗಿ ಉದಾಹರಿಸಿದ್ದೇನೆ.  
     ಸಂಪ್ರದಾಯಗಳನ್ನು ಹೇಗೆ ಆಚರಿಸಬೇಕು ಅನ್ನುವುದಕ್ಕಿಂತ ಕೆಟ್ಟ ಸಂಪ್ರದಾಯಗಳನ್ನು ಗುರುತಿಸಿ ಅವುಗಳಿಂದ ದೂರ ಉಳಿಯಲು ಮತ್ತು ಸಾಧ್ಯವಾದರೆ ತಡೆಯಲು ಪ್ರಯತ್ನಿಸುವುದು ಇಂದಿನ ಅಗತ್ಯ. ಮಠ-ಮಂದಿರಗಳು, ಮಸೀದಿಗಳು, ಚರ್ಚುಗಳು, ಇತ್ಯಾದಿಗಳು ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಶ್ರದ್ಧಾ ಕೇಂದ್ರಗಳಾಗಿವೆ. ಈ ಕೇಂದ್ರಗಳು ವಾಸ್ತವವಾಗಿ ಸತ್ಕರ್ಮಗಳನ್ನು ಪೋಷಿಸುವ, ಜ್ಞಾನ ಪಸರಿಸುವ ಕೆಲಸ ಮಾಡಬೇಕು. ವಿಷಾದದ ಸಂಗತಿಯೆಂದರೆ ಹೆಚ್ಚಿನವು ಋಣಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಶೈಕ್ಷಣಿಕ, ವೈದ್ಯಕೀಯ ಸಂಸ್ಥೆಗಳನ್ನು, ಕಲ್ಯಾಣ ಮಂದಿರಗಳನ್ನು ಕಟ್ಟಿ ಹಣ ಮಾಡುವ ಕೇಂದ್ರಗಳಾಗಿವೆ. ತಿರಳಿಗಿಂತ ಸಿಪ್ಪೆಗೆ ಹೆಚ್ಚು ಮಾನ್ಯತೆ ಕೊಡಲಾಗುತ್ತಿದೆ. ನಿಜ, ತಿರುಳಿನ ರಕ್ಷಣೆಗೆ ಸಿಪ್ಪೆಯಿರಬೇಕು, ಆದರೆ ಸಿಪ್ಪೆಯೇ ತಿರುಳಾಗಬಾರದು. ಆ ಕಾರಣದಿಂದಾಗಿ ಉತ್ತರಾಧಿಕಾರಕ್ಕಾಗಿ ಕಚ್ಚಾಡುವ, ಒಡೆತನ ಸಾಧಿಸಬಯಸುವವರ ಕೂಟ ಅಲ್ಲಿ ಮನೆ ಮಾಡಿವೆ. ಮೂಲ ಉದ್ದೇಶ ಮರೆತು ಭೌತಿಕ ಆಸ್ತಿ, ಸಂಪತ್ತು ಕ್ರೋಢೀಕರಿಸಲು ನೀಡುವ ಮಹತ್ವವೇ ಇದಕ್ಕೆ ಕಾರಣವೆಂದರೆ ಅದರಲ್ಲಿ ಅತಿಶಯೋಕ್ತಿಯಿಲ್ಲ.
     ನನಗೆ ಬಂದಿದ್ದ ಇ-ಮೇಲ್ ಒಂದರಿಂದ ರೂಢಿಗತ ಸಂಪ್ರದಾಯಗಳಿಗೆ ಹೇಗೆ ಮನಸ್ಸು ಒಗ್ಗಿಕೊಳ್ಳುತ್ತದೆ ಎಂಬುದಕ್ಕೆ ಅತ್ಯತ್ತಮ ಉದಾಹರಣೆ ಸಿಕ್ಕಿತು. ಅದೆಂದರೆ ಬಲಶಾಲಿ ಆನೆಯ ಕಾಲಿಗೆ ಕಬ್ಬಿಣದ ಸರಪಳಿ ಹಾಕಿ ಮರವೊಂದಕ್ಕೆ ಕಟ್ಟಿ ಹಾಕಿದರೆ ಅದು ಬಿಡಿಸಿಕೊಳ್ಳಲು ಪ್ರಯತ್ನವೇ ಮಾಡುವುದಿಲ್ಲ. ಆನೆ ಎಷ್ಟು ಬಲಶಾಲಿಯೆಂದರೆ ಅದಕ್ಕೆ ಆ ಸರಪಳಿ ಮತ್ತು ಮರ ಲೆಕ್ಕವೇ ಅಲ್ಲ. ಅದು ಮನಸ್ಸು ಮಾಡಿದರೆ ಸರಪಳಿ ತುಂಡರಿಸಬಲ್ಲದು ಮತ್ತು ಮರವನ್ನು ಕಿತ್ತು ಬಿಸಾಡಬಲ್ಲದು. ಆದರೂ ಅದು ಮಾಡುವುದಿಲ್ಲ. ಏಕೆಂದರೆ ಆನೆ ಚಿಕ್ಕದಾಗಿದ್ದಾಗ ಅದನ್ನು ಅದೇ ರೀತಿ ಕಟ್ಟಿ ಹಾಕಲಾಗುತ್ತಿತ್ತು. ಚಿಕ್ಕದಾಗಿದ್ದರಿಂದ ಅದರಿಂದ ಬಿಡಿಸಿಕೊಳ್ಳಲು ಅದು ಎಷ್ಟೇ ಪ್ರಯತ್ನಿಸಿದರೂ ಆಗ ಆಗುತ್ತಿರಲಿಲ್ಲ. ಕ್ರಮೇಣ ಅದೇ ಅಭ್ಯಾಸವಾಗಿ ಮರಕ್ಕೆ ಕಟ್ಟಿ ಹಾಕಿದರೆ ಬಿಡಿಸಿಕೊಳ್ಳಲಾಗುವುದಿಲ್ಲವೆಂಬ ಭಾವ ಗಟ್ಟಿಗೊಂಡು ಅದು ದೊಡ್ಡದಾದ ಮೇಲೂ ಹಾಗೆ ಕಟ್ಟಿಹಾಕಿದರೆ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರಲೇ ಇರಲಿಲ್ಲ. ನಮ್ಮ ಸ್ಥಿತಿ ಸಹ ಅದೇ ರೀತಿ ಇದೆ. ನಮಗೆ ವಿಚಾರ ಮಾಡುವ ಶಕ್ತಿ ದೇವರು ಕೊಟ್ಟಿದ್ದಾನೆ. ಕೆಲವು ಸಂಪ್ರದಾಯಗಳು ಅರ್ಥಹೀನವೆಂದು ನಮಗೆ ತಿಳಿಯುತ್ತದೆ, ಮನಸ್ಸು ಮಾಡಿದರೆ ಅದನ್ನು ಧಿಕ್ಕರಿಸುವ, ಮುಂದುವರೆಸದಿರುವ ಶಕ್ತಿ ನಮಗಿದೆ, ಆದರೂ ನಾವು ಹಾಗೆ ಮಾಡುವುದಿಲ್ಲವೆಂಬುದು ವಿಷಾದದ ಸಂಗತಿ. 'ಅಪ್ಪ ಹಾಕಿದ ಆಲದಮರವೆಂದು ಅದಕ್ಕೆ ನೇಣು ಹಾಕಿಕೊಳ್ಳಲಾಗುವುದೇ' ಎಂಬ ಪ್ರಚಲಿತ ಗಾದೆ ಮಾತು ತಿಳಿಸುವುದೂ ವಿಚಾರ ಮಾಡಿ ಮುಂದುವರೆಯಿರಿ ಎಂದೇ. ಸಾರಾಸಗಟಾಗಿ ಎಲ್ಲವನ್ನೂ ತಳ್ಳಿಹಾಕಬೇಕಾಗಿಲ್ಲ. ಕುಟುಂಬಕ್ಕೆ, ಸುತ್ತಮುತ್ತಲಿನವರಿಗೆ ಹಿತವೆನಿಸುವ ಒಳ್ಳೆಯ ಸಂಪ್ರದಾಯಗಳನ್ನು ಉಳಿಸಿ ಬೆಳೆಸಬಹುದು, ಆದರೆ ಅನಿಷ್ಠ ಸಂಪ್ರದಾಯಗಳನ್ನು ನಿಲ್ಲಿಸುವ ಮತ್ತು ಸದ್ಯಕ್ಕೆ ಒಳ್ಳೆಯದೆನಿಸಿದರೂ ಕಾಲಾನುಕಾಲಕ್ಕೆ ಅದರ ಆಚರಣೆಯಿಂದ ಆಗುವ ಪರಿಣಾಮಗಳನ್ನೂ ಗಮನಿಸಿ ಯೋಗ್ಯತಾನುಸಾರ ನಿರ್ಣಯಿಸಿ ಅಂತಹವುಗಳನ್ನು ಕೈಬಿಡುವ ಬಗ್ಗೆ ನಿರ್ಧರಿಸುವುದು ಇಂದಿನ ಅಗತ್ಯವಾಗಿದೆ. ಸಂಪ್ರದಾಯಗಳು ನಮ್ಮನ್ನು ಕಟ್ಟಿಹಾಕುವ ಸರಪಳಿಗಳಾಗದಿರಲಿ; ನಮ್ಮನ್ನು ಒಳ್ಳೆಯ ದಾರಿಯಲ್ಲಿ ಮುನ್ನಡೆಸುವ ದಾರಿದೀಪಗಳಾಗಲಿ.
****************
-ಕ.ವೆಂ.ನಾಗರಾಜ್.

ಶನಿವಾರ, ಏಪ್ರಿಲ್ 23, 2011

"ಬ್ರಹ್ಮಾರ್ಪಣಂ ಬ್ರಹ್ಮಹವಿಃ"

ಬ್ರಹ್ಮಾರ್ಪಣಂ ಬ್ರಹ್ಮ ಹವಿರ್ಬ್ರಹ್ಮಾಗ್ನೌ ಬ್ರಹ್ಮಣಾ ಹುತಮ್
ಬ್ರಹ್ಮೈವ ತೇನ ಗಂತವ್ಯಂ  ಬ್ರಹ್ಮಕರ್ಮಸಮಾಧಿನಾ       ೨೪

ಬ್ರಹ್ಮ ಅರ್ಪಣಮ್  ಬ್ರಹ್ಮ ಹವಿಃ ಬ್ರಹ್ಮ ಅಗ್ನೌ ಬ್ರಹ್ಮಣಾ ಹುತಮ್
ಬ್ರಹ್ಮ ಏವ  ತೇನ ಗಂತವ್ಯಮ್   ಬ್ರಹ್ಮ ಕರ್ಮ ಸಮಾಧಿನಾ-ಅರ್ಪಣವೂ ಭಗವಂತ [ಭಗವಂತನಲ್ಲಿ ಅರ್ಪಣ]. ಅರ್ಪಿಸುವ ಹವಿಸ್ಸೂ ಭಗವಂತ[ಭಗವಂತನಾದ ಹವಿಸ್ಸು]. ಬೆಂಕಿಯ ರೂಪದಲ್ಲಿರುವ ಭಗವಂತನಲ್ಲಿ [ಭಗವದದೀನವಾದ ಬೆಂಕಿಯಲ್ಲಿ] ಭಗವಂತನಿಂದಲೆ ಹೋಮಮಾಡಿತು. ಬಗೆಯ ಏಕಾಗ್ರತೆಯ ಜತೆಗೆ ಕರ್ಮದ ವ್ಯಗ್ರತೆಯೂ ಭಗವಂತನೆ [ಭಗವಂತನ ಅಧೀನವಾದದ್ದು]

ಅಭಿಮಾನ ತ್ಯಾಗದಿಂದ ಜ್ಞಾನದ ಸ್ಥಿತಿಯಲ್ಲಿ ಕರ್ಮ ಮಾಡಿದರೆ ಹೇಗಿರುತ್ತದೆ ಎನ್ನುವುದಕ್ಕೆ ಉತ್ತರ "ಬ್ರಹ್ಮಾರ್ಪಣಂ ಬ್ರಹ್ಮಹವಿಃ" . ಇಲ್ಲಿ ಅರ್ಪಣ ಅನ್ನುವದನ್ನು ಈ ರೀತಿ ಅರ್ಥ ಮಾಡಿಕೊಳ್ಳಬಹುದು. ನಾವು ಒಂದು ಹವಿಸ್ಸನ್ನು ಅಗ್ನಿಯಲ್ಲಿ ಭಗವಂತನಿಗೆ ಅರ್ಪಣೆ ಮಾಡುತ್ತೇವೆ- ಇದು ಅರ್ಪಣೆ. ಒಬ್ಬ ಹಸಿದವನಿಗೆ ಅನ್ನ ನೀಡುತ್ತೇವೆ-ಇದು ಅರ್ಪಣೆ. ಒಬ್ಬ ಯೋಗ್ಯ ವರನಿಗೆ ಕನ್ಯಾದಾನ ಮಾಡುತ್ತೇವೆ-ಇದು ಅರ್ಪಣೆ. ಒಬ್ಬ ಹಣದ ಸಮಸ್ಯಯಲ್ಲಿದ್ದಾಗ ಆತನಿಗೆ ಸಹಾಯ ಮಾಡುತ್ತೇವೆ-ಇದು ಅರ್ಪಣೆ. ಇಲ್ಲಿ ಕೊಡುವವನೂ ಆ ಭಗವಂತ, ತೆಗೆದುಕೊಳ್ಳುವವನ ಒಳಗಿದ್ದು ಸ್ವೀಕರಿಸುವವನೂ ಅವನೇ. ಎಲ್ಲವೂ ಭಗವಂತನ ಇಚ್ಛೆಯಂತೆ ನಡೆಯುತ್ತದೆ. ಹವಿಸ್ಸು ಅಂದರೆ ಕೊಡುವ ವಸ್ತು. ಅರ್ಪಣ-ಕೊಡುವ  ಕ್ರಿಯೆ. ಯಾವ ವಸ್ತು ಕೂಡಾ ಹವಿಸ್ಸಾಗಬಹುದು. ದಾನ ದ್ರವ್ಯ ಹವಿಸ್ಸು, ಯಜ್ಞದಲ್ಲಿ ಅಗ್ನಿ ಮುಖೇನ ಅರ್ಪಿಸುವ ದ್ರವ್ಯ ಹವಿಸ್ಸು. ನಾವು ಹುಟ್ಟುವಾಗ ಏನನ್ನೂ ತೆಗೆದುಕೊಂಡು ಬಂದಿಲ್ಲ, ಎಲ್ಲವನ್ನೂ ಈ ಪ್ರಕೃತಿಯಿಂದ ಪಡೆದಿರುವುದು ಅಂದಮೇಲೆ  ನಾವು ಕೊಡುವ ಹವಿಸ್ಸು ಕೂಡಾ ಆ ಭಗವಂತನ ಅಧೀನ. ಇಲ್ಲಿ 'ನನ್ನದು' ಎನ್ನುವುದು ಹಾಸ್ಯಾಸ್ಪದ.
ಅಗ್ನಿ   ಮುಖೇನ  ನಾವು ದ್ರವ್ಯವನ್ನು ಅರ್ಪಿಸುತ್ತೇವೆ. ಇಲ್ಲಿ ಅಗ್ನಿ ಎಂದರೆ ಬರಿಯ ಜಡವಾದ ಬೆಂಕಿ ಅಲ್ಲ. ಸಂಸ್ಕೃತದಲ್ಲಿ ಅಗ್ನಿ ಎಂದರೆ ಅಗ್ನಿಯ ಅಭಿಮಾನಿ ದೇವತೆ, ಅದು  ಚೇತನ. ಈ ಕಾರಣಕ್ಕಾಗಿ ಅಗ್ನಿಯನ್ನು ಸಾಕ್ಷಿಯಾಗಿ ಬಳಸುತ್ತಾರೆ (ಉದಾ: ಅಗ್ನಿ ಸಾಕ್ಷಿಯಾಗಿ ಮದುವೆಯಾಗುವುದು). ಜಡವನ್ನು ಎಂದೂ ಸಾಕ್ಷಿಯಾಗಿ ಬಳಸಲು ಬರುವುದಿಲ್ಲ. ಈ ಅಗ್ನಿದೇವತೆಯ ಒಳಗೆ ತಾರಕ  ಶಕ್ತಿಯಾಗಿ ಆ ಭಗವಂತನಿದ್ದಾನೆ.  ಇಲ್ಲಿ ಕೊಡುವುದು, ಕೊಡತಕ್ಕದ್ದು, ಕೊಡುವ ಕ್ರಿಯೆ, ಕೊಟ್ಟಿದ್ದು ಎಲ್ಲಿಯೋ  ಎಲ್ಲವೂ ಭಗವಂತನ ಅಧೀನ. ಎಲ್ಲಾ ಕ್ರಿಯೆಯಲ್ಲಿ  ಭಗವಂತನ ಸನ್ನಿದಾನವಿದೆ. ಕೊಡತಕ್ಕ ವಸ್ತುವಿನಲ್ಲಿ ಆತನ ಸನ್ನಿದಾನವಿರುವುದರಿಂದ ಅದು ಉಪಯುಕ್ತವಾಗಿರುತ್ತದೆ. ಜ್ಞಾನ ರೂಪನಾದ ಭಗವಂತ ಅಗ್ನಿಯಲ್ಲಿ ಸನ್ನಿಹಿತನಾಗಿ ಭಕ್ತಿ ರೂಪದ ಆಹುತಿಯನ್ನು ಸ್ವೀಕರಿಸುತ್ತಾನೆ. ಈ ಅನುಸಂಧಾನದಿಂದ ನಮ್ಮ ಕ್ರಿಯೆ ನಡೆದರೆ ನಾವು ಭಗವಂತನ ಆರಾದನೆ ಮಾಡಿದಾಗ  "ಬ್ರಹ್ಮೈವ ತೇನ ಗಂತವ್ಯಂ"-ಹೋಗಿ ಸೇರುವುದೂ ಭಗವಂತನನ್ನೇ. ಏಕೆಂದರೆ "ಬ್ರಹ್ಮಕರ್ಮಸಮಾಧಿನಾ" -ಎಲ್ಲವೂ ಸರ್ವಸಮರ್ಥನಾದ ಭಗವಂತನ ಅಧೀನ.
 ಇಲ್ಲಿ ಬ್ರಹ್ಮಾರ್ಪಣ ಎಂದರೆ ಎಲ್ಲಾ ಕ್ರಿಯೆಯೂ ಭಗವಂತನಿಗೆ ಎಂದರ್ಥ. ಪ್ರಪಂಚದಲ್ಲಿರುವ ಎಲ್ಲಾ ವಸ್ತುವನ್ನು  ಸೃಷ್ಟಿಸಿದ್ದು ಆ ಭಗವಂತ. ಪ್ರಕೃತಿಯಲ್ಲಿ ಸೃಷ್ಟಿಯಾಗಿರುವುದನ್ನು ನಾವು ಉಪಯೋಗಿಸುತ್ತೇವೆ ಅಷ್ಟೆ. ಅಗ್ನಿ ಭಗವಂತನ ಅಧೀನವಾಗಿ ಕಾರ್ಯ ನಿರ್ವಹಿಸುತ್ತಾನೆ. 'ನಾವು ಮಾಡುವ ಕ್ರಿಯೆ ಆ ಭಗವಂತನ ಪ್ರೇರಣೆ. ನಾವು ಮಾಡುವ ಎಲ್ಲಾ ಕರ್ಮವೂ ಬ್ರಹ್ಮಕರ್ಮ. ಅದು ಭಗವಂತನ  ಪೂಜಾರೂಪವಾದ ಕರ್ಮ'- ಇದು ಕರ್ಮದ ಬಗ್ಗೆ ನಮಗಿರಬೇಕಾದ ಜ್ಞಾನ.ನಾವು ಮಾಡುವ ಕರ್ಮದಲ್ಲಿ ನಮ್ಮ ಸ್ವಾರ್ಥ ಇರಕೂಡದು ಅದು ಭಗವಂತನ ಪೂಜಾ ರೂಪವಾಗಿರಬೇಕು. ಯಜ್ಞ ಎಂದರೆ ಅಗ್ನಿ ಮುಖೇನ ಮಾಡುವ ಕ್ರಿಯೆ ಮಾತ್ರ ಅಲ್ಲ. ನಮ್ಮ ಬದುಕನ್ನು ಭಗವನ್ಮಯ ಮಾಡಿಕೊಂಡಾಗ ನಮ್ಮ ಜೀವನದ ಎಲ್ಲಾ ನಡೆಯೂ ಯಜ್ಞವಾಗಿಬಿಡುತ್ತದೆ. ನಮ್ಮ ಬದುಕು ಭಗವಂತನ ಚಿಂತನೆಗೆ ಮೀಸಲಾದಾಗ ನಮ್ಮ ಬದುಕೇ ಒಂದು ಮಹಾಯಜ್ಞ. ಭಗವಂತನ ಚಿಂತನೆ ಇಲ್ಲದೆ ಸ್ವಾರ್ಥದಿಂದ  ಮಾಡುವ ಅಗ್ನಿ ಮುಖೇನವಾದ  ಯಜ್ಞ ಕೇವಲ ವ್ಯಾಪಾರ.  ಪೌರೋಹಿತ್ಯ ಕೂಡಾ ಹೀಗೆ.  ತಿಳಿದು ಮಾಡಿದಾಗ ಮಾತ್ರ ಅದು ನಿಜವಾದ ಪೌರೋಹಿತ್ಯ, ಇಲ್ಲದಿದ್ದರೆ ಅದು ಕೇವಲ ದುಡ್ಡಿಗಾಗಿ ಮಾಡುವ ದಂದೆ.
ಈ ತನಕ  ಕೃಷ್ಣ ಕರ್ಮದ ಪ್ರಭೇದದ ಬಗ್ಗೆ ಹೇಳಿದ, ದೇವರ ಪೂಜಾರೂಪವಾಗಿ ಮಾಡುವ ಪ್ರತಿಯೊಂದು ಕಾರ್ಯ ಕೂಡಾ ಯಜ್ಞ ಎನ್ನುವ ವಿಚಾರ ವಿಶ್ಲೇಷಣೆ ಮಾಡಿದ. ಮುಂದೆ ಯಜ್ಞದ ಬಗ್ಗೆ ವ್ಯಾಪಕವಾದ ಅರ್ಥವನ್ನು ಕೃಷ್ಣ ವಿವರಿಸುತ್ತಾನೆ. ಹಿಂದೆ ಹೇಳಿದಂತೆ ಅಗ್ನಿ ಮುಖದಲ್ಲಿ ಮಾಡುವ ಪೂಜೆ  ಮಾತ್ರ ಯಜ್ಞವಲ್ಲ. ಕೊಡುವಿಕೆ, ಪೂಜೆಯಂತಹ ಒಳ್ಳೆಯ ಕಾರ್ಯಕ್ಕೆ ಒಂದು ಕಡೆ ಸೇರುವಿಕೆ(ಸಂಗತೀಕರಣ), ಜ್ಞಾನದಾನ, ಅನ್ನದಾನ, ನಮ್ಮಲ್ಲಿ ಹೆಚ್ಚಿಗೆ ಇರುವುದನ್ನು ಇಲ್ಲದವರಿಗೆ ಹಂಚಿ ಬದುಕುವುದು, ಎಲ್ಲವೂ ಒಂದು ಯಜ್ಞವೇ.     ಮುಂದಿನ ಶ್ಲೋಕಗಳಲ್ಲಿ ಯಜ್ಞದ ವಿಶ್ವತೋಮುಖ ಚಿತ್ರವನ್ನು ಕೃಷ್ಣ ನಮಗೆ ನೀಡುತ್ತಾನೆ.
ಸಾಮಾನ್ಯವಾಗಿ ಯಜ್ಞದಲ್ಲಿ ಎರಡು ವಿಧ. ಒಂದು ಅಂತರಂಗ ಯಜ್ಞ ಇನ್ನೊಂದು ಬಾಹ್ಯಯಜ್ಞ. ಅಂತರಂಗದಲ್ಲಿ  ಭಗವಂತನ ನಿರಂತ ಪೂಜೆ(ದೇವಪೂಜಾ); ಚಿತ್ತ-ಮನಸ್ಸು ಭಗವಂತನ ಜೊತೆಗೆ ಸೇರುವುದು(ಸಂಗತೀಕರಣ) ಮತ್ತು ನಮ್ಮನ್ನು ನಾವು ಭಗವಂತನಿಗೆ ಅರ್ಪಿಸಿಕೊಳ್ಳುವುದು ಪರಿಪೂರ್ಣವಾದ ಮಾನಸ ಯಜ್ಞ. ಇನ್ನೊಂದು ರೀತಿಯಲ್ಲಿ ಯಜ್ಞದಲ್ಲಿ ಎರಡು ಬಗೆ:  ಜ್ಞಾನಪ್ರದವಾದ ಯಜ್ಞ ಹಾಗು ಕರ್ಮಪ್ರದವಾದ ಯಜ್ಞ. ಈ ಎಲ್ಲಾ ವಿವರಣೆಯನ್ನು ಮುಂದಿನ ಶ್ಲೋಕಗಳಲ್ಲಿ ಕೃಷ್ಣ ವಿವರಿಸಿದ್ದಾನೆ.
-Shamala Janardhanan

ಶುಕ್ರವಾರ, ಏಪ್ರಿಲ್ 22, 2011

ಮನವಿ


              ವೈಜ್ಞಾನಿಕವಾಗಿ ನಮ್ಮ ದೇಶವು ಮುನ್ನಡೆಸಾಧಿಸಿದ್ದರೂ ಕೂಡ  ಸಮಾಜದ ಸ್ವಾಸ್ಥ್ಯಕ್ಕೆ  ದಿನದಿಂದ ದಿನಕ್ಕೆ ಪೆಟ್ಟುಬೀಳುತ್ತಿರುವುದು  ಸಮಾಜದ ಬಗ್ಗೆ ಕಳಕಳಿ ಇರುವ ಎಲ್ಲರಿಗೂ ಆತಂಕದ ವಿಷಯವಾಗಿದೆ.
ಆದ್ದರಿಂದ ಸಾಮಾಜಿಕ ಸ್ವಾಸ್ಥ್ಯಕಾಪಾಡುವ ಬಗ್ಗೆ ಜಾಗೃತಿ ಮೂಡಿಸುವುದು ಇಂದಿನ ಅತೀ ಅಗತ್ಯವಾಗಿದೆ. ನಮ್ಮ ಸಂಸ್ಕೃತಿ-ಪರಂಪರೆಗಳ ಬಗ್ಗೆ ಸರಿಯಾದ ಅರಿವಿನ ಕೊರತೆಯೇ ಇಂದಿನ ಸಮಾಜದ ದು:ಸ್ಥಿತಿಗೆ ಕಾರಣವೆಂಬುದು ಸುಳ್ಳಲ್ಲ.ಸಂಸ್ಕೃತ ಭಾಷೆಯು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ನಮ್ಮ ದೇಶದ ಹಾಗೂ ಕೆಲವು ಹೊರದೇಶಗಳ ಹಲವು ಭಾಷೆಗೆ ಜನ್ಮ ಕೊಟ್ಟಂತಹ ಮಾತೃ ಭಾಷೆಯಾಗಿದೆ. ಅತ್ಯಂತ ಮಧುರವೂ ಸರಳವೂ ಆಗಿರುವ  ಸಂಸ್ಕೃತ ಭಾಷೆಯ ಬಗ್ಗೆ ಅದೊಂದು ಕಠಿಣವಾದ ಭಾಷೆಯೆಂದು ಬೆಳೆದಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಬೇಕಾಗಿದೆ. ಅದಕ್ಕಾಗಿ  ಸಂಸ್ಕೃತದ ಸರಳ  ಸಂಭಾಷಣೆಯ ಮೂಲಕ ಸಂಸ್ಕೃತದ  ಅರಿವನ್ನು ಮೂಡಿಸಿ ತನ್ಮೂಲಕ  ನಮ್ಮ ಸಂಸ್ಕೃತಿ-ಪರಂಪರೆಗಳ ಸರಿಯಾದ ಪರಿಚಯವನ್ನು ಇಂದಿನ ಪೀಳಿಗೆಗೆ ಮಾಡಿಸಲು ಸಂಸ್ಕೃತ ಭಾರತಿಯು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ದಿಸೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ|| ಡಿ. ವೀರೇಂದ್ರಹೆಗ್ಗಡೆಯವರ ಮಾರ್ಗದರ್ಶದ ಮೇರೆಗೆ  ದಿನಾಂಕ 2.4.2011 ರಿಂದ 1.5.2011 ರವರಗೆ ಕರ್ನಾಟಕ ರಾಜ್ಯಮಟ್ಟದ ಸಂಸ್ಕೃತ ಶಿಕ್ಷಕ ಪ್ರಶಿಕ್ಷಣವರ್ಗವು ಹಾಸನ ನಗರದ ಶ್ರೀ ಧರ್ಮಸ್ಥಳ ಮಂಜುನಾಥ ಆಯುರ್ವೇದ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವುದು ಹಾಸನದ ಜನತೆಗೆ ಅಭಿಮಾನದ  ವಿಷಯವಾಗಿದೆ.
·         ಶಿಬಿರದಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ ಸುಮಾರು 150 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸುತ್ತಿದ್ದು ಶಿಬಿರಾರ್ಥಿಗಳಿಗೆ ಶಿಕ್ಷಣ ನೀಡಲು ರಾಜ್ಯದ ನಾನಾ ಭಾಗಗಳಿಂದ ಹಾಗೂ ಹೊರರಾಜ್ಯಗಳಿಂದ ಸುಮಾರು 40 ಜನ ವಿದ್ವಾಂಸರುಗಳು ಬಂದು ಶಿಕ್ಷಣವನ್ನು ನೀಡಲಿದ್ದಾರೆ.
·         ನಮ್ಮ ವೈಜ್ಞಾನಿಕ ಪರಂಪರೆಯನ್ನು ಬಿಂಬಿಸುವ ಸಂಸ್ಕೃತ ವಿಜ್ಞಾನ ಪ್ರದರ್ಶಿನಿಯು ಶಿಬಿರದ ಮುಖ್ಯವಾದ ಆಕರ್ಷಣೆಯಲ್ಲಿ ಒಂದಾಗಿರುತ್ತದೆ.
·         ಕೇವಲ ಹತ್ತು ದಿನಗಳಲ್ಲಿ  ಸಂಸ್ಕೃತದಲ್ಲಿ ಮಾತನಾಡಲು ಕಲಿಸುವ ಸಂಭಾಷಣಾ ಶಿಬಿರವು ಹಾಸನ ನಗರದ ನಾಲ್ಕು ಕಡೆಗಳಲ್ಲಿ  ಇದೇ ಸಮಯದಲ್ಲಿ ನಡೆಯಲಿವೆ.
·         ಶಿಬಿರದ ಕಡೆಯದಿನವಾದ 1.05.2011 ಭಾನುವಾರ ದಂದು ಮಧ್ಯಾಹ್ನ 3.30ಕ್ಕೆ ನಗರದ ಹಾಸನಾಂಭ ದೇವಾಲಯದಿಂದ ಹೊರಡುವ ಶೋಭಾಯತ್ರೆಯು ಶ್ರೀ ಗಣಪತಿ ದೇವಾಲಯ, ಗಾಂಧಿಬಜಾರ್,ನರಸಿಂನರಾಜ ವೃತ್ತ ,ಹೇಮಾವತಿ ಪ್ರತಿಮೆ ಮತ್ತು ಮಹಾವೀರ ವೃತ್ತದ ಮೂಲಕ ಕನ್ನಡಸಾಹಿತ್ಯಪರಿಷತ್ ಆವರಣವನ್ನು ಸೇರುತ್ತದೆ.
·         ಅಂದು ಸಂಜೆ 5.00 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಸಾರ್ವಜನಿಕ ಸಮಾರಂಭವು ನಡೆಯಲಿದೆ.
ಸಂಸ್ಕೃತ ಭಾರತಿಯ ಚಟುವಟಿಕೆಗಳ ಸಂಕ್ಷಿಪ್ತ ಮಾಹಿತಿ
1]ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲೂ ,13 ಹೊರದೇಶಗಳಲ್ಲೂ, ನಮ್ಮ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಂಸ್ಕೃತ ಚಟುವಟಿಕೆಗಳು.
2] 1984 ರಲ್ಲಿ ಆರಂಭಗೊಂಡ ಸಂಸ್ಕೃತ ಭಾರತಿಯಿಂದ ಈವರಗೆ ಸುಮಾರು ಒಂದು ಲಕ್ಷ ಶಿಬಿರಗಳು. ಸುಮಾರು ಎರಡುಕೋಟಿ ಜನರಿಗೆ  ನಡೆಸಿದ ಸರಳ ಸಂಸ್ಕೃತ ಸಂಸ್ಕೃತ ಸಂಭಾಷಣಾ ಶಿಬಿರಗಳು.
3]ಹಳ್ಳಿಯ ರೈತನಿಂದ ದಿಲ್ಲಿಯ ಸಂಸತ್ತಿನವರೆಗೂ  ಸಂಭಾಷಣಾ ಶಿಬಿರ ನಡೆಸಿರುವ ಹೆಗ್ಗಳಿಕೆ.
4] ಭಾರತದ ಸಂಸ್ಕೃತಿಯ ಬೇರುಗಳಾದ ಭಗವದ್ಗೀತೆ, ರಾಮಾಯಣ ಮಹಾಭಾರತಗಳ ಪರಿಚಯ ಕಾರ್ಯಕ್ರಮಗಳು
5]ನೈತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ವರ್ಧಿಸಬಲ್ಲ ಸಂಸ್ಕೃತ ಸುಭಾಷಿತಗಳನ್ನು  ಕಲಿಸುವ ಶಿಬಿರಗಳ ಆಯೋಜನೆ.
6] ಸಂಸ್ಕೃತದಲ್ಲಿಯೇ ಆಟಗಳು,ಭಾಷಣಕಲೆ, ಚರ್ಚಾಸ್ಪರ್ಧೆಗಳು, ಬೀದಿನಾಟಕಗಳ ಆಯೋಜನೆ.

ಸಂಸ್ಕೃತ ಶಿಕ್ಷಕರ ಪ್ರಾಂತಮಟ್ಟದ ಪ್ರಶಿಕ್ಷಣವರ್ಗ

ಸಂಸ್ಕೃತ ಭಾರತಿಯ ವತಿಯಿಂದ ಸಂಸ್ಕೃತ ಶಿಕ್ಷಕರ ಪ್ರಾಂತಮಟ್ಟದ ಪ್ರಶಿಕ್ಷಣವರ್ಗವು ಹಾಸನದಲ್ಲಿ ಆರಂಭವಾಗಿದೆ. ಅದರ ಕೆಲವು ಚಿತ್ರಗಳು ಮತ್ತು ವೀಡಿಯೋಗಳನ್ನು ಇಲ್ಲಿ ನೋಡಬಹುದಾಗಿದೆ.



“ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ.....”

 “ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ.....” ಎನ್ನುವ ಶ್ರಿ ಕನಕದಾಸರ ಕೃತಿ ಮಾಯೆಯ ಮಾಯಾಜಾಲವನ್ನು ವಿಧವಿಧವಾದ ಉಪಮೆಗಳೊಂದಿಗೆ ಬಿಂಬಿಸುತ್ತದೆ. ಮಾಯೆಯ ಮೋಡಿಗೆ ಒಳಗಾಗದವರಿಲ್ಲ; ಮಾಯೆಯ ಜಾಲಕ್ಕೆ ಸಿಲುಕದವರಿಲ್ಲ ಮತ್ತು ಮಾಯೆಯ ಬಲೆಗೆ ಬಿದ್ದು ಸಂಕಟಕ್ಕೀಡಾಗದವರಿಲ್ಲ. ವಿಪರ್ಯಾಸವೆಂದರೆ, ಮಾಯೆಯೆಂದು ತಿಳಿದೂ ಅದರ ಪಾಶದಲ್ಲಿ ಸಿಲುಕಿಕೊಳ್ಳುವ ಮಾಯೆಯ ಆಕರ್ಷಣೆ ಅಷ್ಟು ಪ್ರಬಲವಾದದ್ದು. ಒಂದು ರೀತಿ ಸತ್ಯವನ್ನು, ವಾಸ್ತವವನ್ನು ಮತ್ತು ನಿಜಸ್ಥಿತಿಯನ್ನು ಮರೆ ಮಾಚಿ, ಅಸತ್ಯದ ಕಡೆಗೆ, ಅವಾಸ್ತವದ ಕಡೆಗೆ ಮತ್ತು ಮಿಥ್ಯದ ಕಡೆಗೆ ನಮ್ಮನ್ನು ಹೊರಳಿಸುವ ಈ ಮಾಯೆಯ ಪ್ರಭಾವ ಅಗಾಧವಾದದ್ದು. ಮಾಯೆಗೆ ವ್ಯಾಖ್ಯಾನಗಳು ಹಲವಾರು. ಕೆಲವರಿಗೆ ಅದು ಬಂಧನವೆಂದಾದರೆ ಮತ್ತೆ ಕೆಲವರಿಗೆ ಅದು ದುರ್ಮಾರ್ಗದೆಡೆಗೆ ಒಯ್ಯುವ ಸಾಧನವೆನಿಸಬಹುದು. ಏನೇ ಆಗಲಿ, ಮಾಯೆಯ ಆಟಕ್ಕೆ ತಲೆ ಬಾಗಿದವನಿಗೆ ಅಪಾಯ, ನಷ್ಟ, ಮಾನಹಾನಿ, ದೇಹಹಾನಿ ಮುಂತಾದ ತೊಂದರೆಗಳು ಕಟ್ಟಿಟ್ಟ ಬುತ್ತಿ. ಬಂಗಾರದ ಜಿಂಕೆಯ ವೇಷದ ರಾವಣನ ಮಾಯಕ್ಕೆ ಬಲಿ ಬಿದ್ದು ನಂತರ ಕೋಟಲೆಗಳ ಸರಮಾಲೆಯನ್ನೇ ಎದುರಿಸಿದ ಸೀತಾಮಾತೆ, ಮೇನಕೆಯ ವೈಯಾರಕ್ಕೆ ಮರುಳಾಗಿ, ಬಾಗಿ, ತಪೋಭಂಗವನ್ನನುಭವಿಸಿದ ವಿಶ್ವಾಮಿತ್ರ ಋಷಿಯಿಂದ ಹಿಡಿದು ಹಗ್ಗವನ್ನು ಹಾವೆಂದು ಭ್ರಮಿಸಿ ಗೋಳಿಡುವ ಪಾಮರರ ಪರಿಪಾಟಲು ಈ ಮಾಯೆ ಯಾರನ್ನೂ ಕೈಬಿಟ್ಟಿಲ್ಲ (ಶನಿ ಗ್ರಹದ ಹಾಗೆ!) ಎಂಬುದನ್ನು ಎತ್ತಿ ತೋರಿಸುತ್ತದೆ. ಹಾಗಾಗಿ ಜೀವನದಲ್ಲಿ ಇಂತಹ ಮೋಹ-ಪಾಶಗಳೆಂಬ ಬಲೆಗಳು ಎದುರಾದಾಗ ಜಾಗರೂಕರಾಗಿ ಅವುಗಳ ನಿಜ ಸ್ವರೂಪವನ್ನರಿತು ಮುಂದುವರೆಯುವುದು ಅತ್ಯಂತ ಅವಶ್ಯಕ.

ಮಾಯೆಯ ಪರಿಕಲ್ಪನೆ ಕೂಡಾ ಒಬ್ಬೊಬ್ಬರಿಗೆ ಒಂದೊಂದು. ಮಾಯೆ ಕುರಿತು ಸರ್ವಜ್ಞನ ಈ ವಚನ ನೋಡಿ: “ಮಾಯೆ ಗೆದ್ದಿಹ ಸೊಲ್ಲು ಬಾಯಿ ಮಾತಲ್ಲವೇ? ಮಾಯೆಯಿಂ ಕಾಯ ಆಗಿರಲು, ಇವರುಗಳಾ! ಮಾಯೆ ಗೆಲಲುಂಟೆ ಸರ್ವಜ್ಞ.” ಅರ್ಥಾತ್ ಮಾಯೆಯನ್ನು ಅಂದರೆ ಹೆಣ್ಣನ್ನು ಗೆದ್ದೆನೆಂದು ಹೇಳುವವರು ಬರೀ ಬಾಯಿ ಮಾತಿನ ಶೂರರು. ನಮ್ಮ ಶರೀರ ಸೃಷ್ಠಿ ಆಗಿರುವುದೇ ಮಾಯೆ. ಅಂದರೆ ಹೆಣ್ಣಿನಿಂದ. ಆದುದರಿಂದ ಮಾಯೆ ಗೆಲಲು ಸಾಧ್ಯವೇ? [ಹೆಣ್ಣಿಗೂ ಗಂಡು ಮಾಯೆಯೇ ಆಗಿರಬಾರದೇಕೆ (?)] ಹಾಗೆ ನೋಡಿದರೆ ಪ್ರಪಂಚದಲ್ಲಿರುವ ಎಲ್ಲಾ ಲೌಕಿಕ (ಪ್ರಾಪಂಚಿಕ) ವಸ್ತುಗಳೂ ಮಾಯೆಯೇ. ಅದು ಚಿನ್ನವಿರಬಹುದು, ಭೂಮಿಯಿರಬಹುದು, ಹೆಣ್ಣಿರಬಹುದು ಅಥವಾ ಇನ್ಯಾವುದೇ ವಸ್ತುವಿರಬಹುದು. ಇಂತಹ ಲೌಕಿಕ ವಸ್ತುಗಳ ಆಕರ್ಷಣೆ ಎಷ್ಟೆಂದರೆ ಅವುಗಳ ಪ್ರಾಪ್ತಿಗಾಗಿ ಮಾನವ ಏನನ್ನು ಮಾಡಲೂ ಸಿದ್ಧನಾಗಿಬಿಡುತ್ತಾನೆ. ಅದಕ್ಕಾಗಿ ಎಲ್ಲಾ ನೈತಿಕ ಮೌಲ್ಯಗಳಿಗೂ ತಿಲಾಂಜಲಿ ನೀಡಲೂ ಹಿಂಜರಿಯುವುದಿಲ್ಲ. ಅಷ್ಟೇ ಏಕೆ, ಅವುಗಳ ಪ್ರಾಪ್ತಿಗಾಗಿ, ತನಗರಿಯದೆಯೇ ತನ್ನ ಸರ್ವಸ್ವವಾದ ಪ್ರಾಣತ್ಯಾಗಕ್ಕೂ ಸಿದ್ಧನಾಗುತ್ತಾನೆ. ಈ ಮಾಯೆಯೆಂಬ ಆಕರ್ಷಣೆ ಅಷ್ಟು ಪ್ರಬಲವಾದದ್ದು. ಮಾಯೆಯ ಮೂಲಗಳಾದ “ಹೆಣ್ಣು-ಹೊನ್ನು-ಮಣ್ಣಿ”ಗಾಗಿ ತಮ್ಮ ರಾಜ್ಯ-ಪ್ರಾಣಗಳನ್ನೇ ಕಳೆದುಕೊಂಡ ಅಸಂಖ್ಯಾತ ನಿದರ್ಶನಗಳು ಪ್ರಪಂಚದ ಇತಿಹಾಸದ ಗರ್ಭದಲ್ಲಿ ಅಡಗಿ ಕುಳಿತಿವೆ. ಇಷ್ಟಾಗಿಯೂ ನಾವು ಪುನ: ಪುನ: “ಇರುಳು ಕಂಡ ಭಾವಿಗೆ ಹಗಲು ಬಿದ್ಧಂತೆ” ನಡೆಯುತ್ತಿರುವುದು ಈ ಮಾಯೆಯೆಂಬ ಭ್ರಮಾಲೋಕದ ಮಹಿಮೆಯಿಂದಲೇ!

ಸೂಕ್ಷ್ಮವಾಗಿ ಮನನ ಮಾಡಿದಾಗ ಸ್ಪಷ್ಟವಾಗುವ ಅಂಶವೆಂದರೆ, ಈ ಪ್ರಾಪಂಚಿಕ ವಸ್ತುಗಳೇ ನಿಜವಾದ ಮಾಯೆಯ ಸ್ವರೂಪಗಳು. ಮೇಲ್ನೋಟಕ್ಕೆ ಇವು ಆರಾಮದಾಯಕ ಮತ್ತು ಸುಖಕರ ಸಾಧನಗಳೆಂದು ತೋರಿದರೂ, ಆಂತರಿಕವಾಗಿ ಅವು ನಮ್ಮೆಲ್ಲ ಕಷ್ಟಕಾರ್ಪಣ್ಯಗಳಿಗೆ ನಿಜವಾದ ಕಾರಣಕರ್ತರುಗಳು.  ಹಾಗೆಂದು ಲೌಕಿಕ ವಸ್ತುಗಳನ್ನು ಸಂಪೂರ್ಣ ವರ್ಜಿಸಬೇಕೆಂದಲ್ಲ. ಪ್ರಪಂಚಕ್ಕೆ ಬಂದ ಮೇಲೆ, ಅದರಲ್ಲೂ ದಿವ್ಯವಾದ ಈ ಮಾನವ ಜನ್ಮ ಪಡೆದ ಮೇಲೆ, ಇರುವ ತನಕ, ಪ್ರಾಪಂಚಿಕ ಮತ್ತು ಅಂತಿಮವಾಗಿ  ಅಲೌಕಿಕ ಸಾಧನೆಗೆ ಈ ಪ್ರಾಪಂಚಿಕ ವಸ್ತುಗಳೇ ಮೆಟ್ಟಿಲುಗಳಷ್ಟೇ ಆಗಬೇಕು. ಆದರೆ ಸುಖ, ಶಾಂತಿ ಮತ್ತು ನೆಮ್ಮದಿಗಳನ್ನು ಅವುಗಳಲ್ಲಿ ಅರಸುವುದು ಕತ್ತಲಲ್ಲಿ ಸೂಜಿಯನ್ನು ಹುಡುಕಿದಂತೆಯೇ. ಬರೀ ಆಸೆ, ಬರೀ ಪರಿಶ್ರಮವಷ್ಟೇ ಆದೀತು. ಆದುದರಿಂದ, ಅವುಗಳ ಸಂದರ್ಭಾನುಸಾರ ಮತ್ತು ಅವಶ್ಯಾನುಸಾರ ಸಂಗ್ರಹಣೆ, ಯುಕ್ತಾಯುಕ್ತಾನುಸಾರ ಬಳಕೆ ಮತ್ತು ಮುಂದಿನ ಪೀಳಿಗೆಗಾಗಿ ಅವುಗಳ ಸಂರಕ್ಷಣೆ ? ಅಂತಹ ವಸ್ತುಗಳ ಮಾಯೆಯ ಪಾಶದಿಂದ ಬಿಡಿಸಿಕೊಳ್ಳಬಹುದಾದಂತಹ ಕೆಲವು ಸರಳೋಪಾಯಗಳು. “ಕಂಕುಳಲ್ಲಿರುವ ಮಗುವನ್ನು ಊರೆಲ್ಲಾ ಹುಡುಕಿದಂತೆ” ನಿಜವಾದ ಸುಖ-ಶಾಂತಿ ನಮ್ಮ ಆಂತರ್ಯದಲ್ಲಿಯೇ ಇದೆ ಎಂಬ ಜ್ಞಾನ ಮತ್ತು ತಿಳುವಳಿಕೆ ಹೆಚ್ಚಿದಷ್ಟೂ ಈ ಪ್ರಾಪಂಚಿಕ ವಸ್ತುಗಳ ಮೇಲಿನ ಮೋಹ ಕಡಿಮೆಯಾಗುತ್ತಾ ಹೋಗುತ್ತದೆ.  ಯಾವುದೇ ಪ್ರಾಪಂಚಿಕ ವಸ್ತುಗಳು ಹೆಚ್ಚಾದರೂ - ಹಣ, ಭೂಮಿ, ಆಭರಣಗಳು, ಇತ್ಯಾದಿ - ಅವುಗಳಿಂದ ಸುಖ, ಶಾಂತಿ, ನೆಮ್ಮದಿಗಿಂತ ಚಿಂತೆ, ಭಯ, ಅವನತಿ ಮತ್ತು ಅಪಾಯಗಳೇ ಹೆಚ್ಚು. ಅದೇ ಅಶಾಂತಿಯ ಮತ್ತು ದುರ್ಮಾರ್ಗದ ಬಾಳುವೆಗೆ ಮುನ್ನುಡಿ. ಇಂದಿನ ಅನೇಕ ರಾಜಕಾರಣಿಗಳ ಮತ್ತು ಧನದಾಹಿಗಳ ಬದುಕು ಕೂಡ ಹೀಗೇ ಆಗಿದೆ. ನೋಡಲಿಕ್ಕಷ್ಟೇ ಅವರು ಮುಖಂಡರು, (ನ)ಗಣ್ಯರು; ಆದರೆ ಆಂತರ್ಯದಲ್ಲಿ ಅವರೆಲ್ಲರೂ ಅಶಾಂತಿಯಿಂದ, ಅಭದ್ರತೆಯಿಂದ ಮತ್ತು ಪಾಪಪ್ರಜ್ಞೆ(ಅದಿದ್ದವರಲ್ಲಿ ಮಾತ್ರಾ!) ಯಿಂದ ಮತ್ತು ಇವುಗಳ ಪ್ರಭಾವದಿಂದ ವಾಸಿಯಾಗದಂತಹ ಅನೇಕ ಖಾಯಿಲೆಗಳಿಂದ ಬಳಲಿ ಬೆಂಡಾದವರೇ/ಬೆಂಡಾಗುತ್ತಿರುವವರೇ.  ಆದರೆ ಇಂತಹ ಪ್ರಾಪಂಚಿಕ ವಸ್ತು/ವ್ಯಕ್ತಿಗಳ ಮೂಲಕ ನಮಗುಂಟಾಗುವ ಮಾಯಾ ಪ್ರಪಂಚದ ಅನುಭವಗಳೇ ಮುಂದೆ ನಮ್ಮನ್ನು ಮಾಯಾಪಾಶದಿಂದ ಬಿಡಿಸಿಕೊಳ್ಳುವ ಸಾಧನಗಳಾದಾವು; ಆಗಬೇಕು. ಅಂಥವುಗಳ ಮಿಥ್ಯ ಅವಲಂಬನೆಯಿಂದ ಉಂಟಾದ ಕಷ್ಟ-ಕೋಟಲೆಗಳು, ನಷ್ಟಗಳು, ಅವಮಾನಗಳು ಇತ್ಯಾದಿ ನಮ್ಮ ಕಣ್ತೆರೆಸಬೇಕು. ಒಮ್ಮೆ ಸಂಪತ್ತನ್ನೇ ಸರ್ವಸ್ವವೆಂದು ತಿಳಿದಿದ್ದ ಶ್ರೀ ಪುರಂದರದಾಸರು ಅದಕ್ಕೆಂದೇ ನಂತರ ಈ ರೀತಿ ಹಾಡಿದ್ದು: “ಆದದ್ದೆಲ್ಲ ಒಳಿತೇ ಆಯಿತು ನಮ್ಮ ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು | ದಂಡಿಗೆ ಬೆತ್ತ ಹಿಡಿಯುವುದಕ್ಕೆ ಮಂಡೆ ಬಾಗಿ ನಾಚುತಲಿದ್ದೆ ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ......”

ಆದುದರಿಂದ ಲೌಕಿಕ ವಸ್ತುಗಳನ್ನು ನಾವು ಪರಿಭಾವಿಸುವ ರೀತಿಯಲ್ಲಿ ಜಾಗ್ರತೆ ವಹಿಸಬೇಕು. ಒಬ್ಬ ಸಾಮಾನ್ಯ ಮನುಷ್ಯ ಓರ್ವ ಸುಂದರ ಯುವತಿಯಲ್ಲಿ ಸೌಂದರ್ಯ ಮತ್ತು ಆಕರ್ಷಣೆ ಕಂಡರೆ, ಅದೇ ರಾಮಕೃಷ್ಣ ಪರಮಹಂಸರು ಅವಳಲ್ಲಿ ದೇವೀ ಅಥವಾ ಮಾತೃಸ್ವರೂಪವನ್ನು ಕಾಣುತ್ತಾರೆ. ಬೇಲೂರು ಶಿಲಾಬಾಲಿಕೆ - ಸಾಮಾನ್ಯ ಮನುಷ್ಯ ಮತ್ತು ಕಲೋಪಾಸಕನಲ್ಲಿ ಬೇರೆ ಬೇರೆ ಭಾವನೆಗಳನ್ನೇ ಉಂಟುಮಾಡುತ್ತದೆ. ಮಾಯೆಯೆ ಪರದೆಯನ್ನು ಸರಿಸಿದಾಗಲೇ ಸತ್ಯದರ್ಶನ ಸಾಧ್ಯವಾಗುತ್ತದೆ. ಕಡು ಲೋಭಿಯಲ್ಲಿರುವ ಧನ ಆತನ ಕಣ್ಣಿಗಷ್ಟೇ ಆಪ್ಯಾಯಮಾನವಾದರೆ, ಧನವಂತನಾದ ಗುಣವಂತ ಆ ಹಣವನ್ನು ಸತ್ಪಾತ್ರರಿಗೆ ಮತ್ತು ಸಮಾಜಮುಖೀ ಕಾರ್ಯಗಳಿಗೆ ವಿನಿಯೋಗಿಸುವುದರಲ್ಲಿಯೇ ಸಾರ್ಥಕ್ಯ ಕಂಡುಕೊಳ್ಳುತ್ತಾನೆ. ಕಲಿತ ವಿದ್ಯೆಯನ್ನು, ಕೌಶಲ್ಯಗಳನ್ನು ಮತ್ತು ಬುದ್ಧಿವಂತಿಕೆಯನ್ನು ಬಳಸಿಕೊಳ್ಳುವಲ್ಲಿ ಕೂಡ ಈ ಮಾಯೆಯ ಪ್ರಭಾವ ಅಗಾಧವಾದುದು. ಈ ಸಂಪನ್ಮೂಲಗಳು ಒಳಿತಿಗೂ-ಕೇಡಿಗೂ ಸಮನಾಗಿ ಬಳಸಿಕೊಳ್ಳುವಂತಹವು. ಸಮಾಜದ ಅತೀ ಗಣ್ಯರು, ವಿದ್ಯಾವಂತರು ಮತ್ತು ಪ್ರಾಜ್ಞರು ಎನಿಸಿಕೊಂಡ ಬಹು ಮಂದಿ ಇಂದು ನಡೆಸುತ್ತಿರುವ ಅನೇಕ ಅನಾಚಾರಗಳೇ ಇದಕ್ಕೆ ಸಾಕ್ಷಿ. ಹಣ, ಯಶಸ್ಸು, ಅಧಿಕಾರ, ಕೀರ್ತಿ ಮುಂತಾದವುಗಳ ಸಂಗ್ರಹಣೆಗಾಗಿ ವಿದ್ಯಾವಂತರೇ ಇಂದು ಎಲ್ಲ ವಾಮಮಾರ್ಗಗಳನ್ನು ಅನುಸರಿಸುತ್ತಿರುವುದು ಕೂಡ ಈ ಮಾಯೆಯೆಂಬ ಬಿಸಿಲು ಕುದುರೆಯನ್ನೇರಿಯೇ! ಕಾಮನಬಿಲ್ಲಿನಷ್ಟು ಆಕರ್ಷಕ ದೃಶ್ಯ ಮತ್ತೊಂದಿಲ್ಲ. ಆದರೆ ಅದು ಅಷ್ಟೇ ಕ್ಷಣಿಕ! ಆ ಸತ್ಯದ ಅರಿವು ನಮ್ಮ ಅಂತರಾಳಕ್ಕಿರಬೇಕಷ್ಟೇ!

ಹಾಗಾಗಿ ಹೊರನೋಟಕ್ಕೆ ಕಂಡು ಬರುವುದೆಲ್ಲಾ ವಾಸ್ತವವಾದುದಲ್ಲ ಎಂಬ ಅಂಶ ತಡವಾಗಿಯಾದರೂ ನಮಗೆ ಸ್ಪಷ್ಟವಾಗಬೇಕು. ನಿಜಾರ್ಥಗಳು-ಗೂಡಾರ್ಥಗಳು ಬೇರೆ ಬೇರೆಯೇ ಇರುತ್ತವೆ.  ನದಿ ಮೂಲ, ಋಷಿ ಮೂಲ, ಸ್ತ್ರೀ ಮೂಲ ಇತ್ಯಾದಿಗಳಂತೆ! ಯಾವ ವಸ್ತುಗಳ-ವ್ಯಕ್ತಿಗಳ ಸದ್ಬಳಕೆಯಿಂದ/ಸಂಪರ್ಕದಿಂದ ಶಾಶ್ವತ ಸುಖ ಅಥವಾ ಶಾಶ್ವತ ನೆಮ್ಮದಿಯೆಡೆಗೆ ನಡೆಯಲು ಸಾಧ್ಯ ಎಂಬ ಒಳ ಚಿಂತನೆ ಬಹಳ ಅವಶ್ಯ. ಒಂದು ಫಲವನ್ನು ಒಬ್ಬನೇ ಸವಿಯುವ ಸವಿಯೇ ಬೇರೆ. ಅದೇ ಫಲವನ್ನು ನಾಲ್ಕಾರು ಜನರಿಗೆ ಹಂಚಿ ಸಾಮೂಹಿಕವಾಗಿ ಸೇವಿಸುವ ಭಾವವೇ ಬೇರೆ. ಅದೇ ಅದರ ನಿಜವಾದ ಸವಿ. ಎಲ್ಲವೂ ನಮಗಿರಲಿ ಎಂಬ ಉತ್ಕಟಾಪೇಕ್ಷೆ ಎಲ್ಲರಲ್ಲಿ ಸಹಜವೇ. ಆದರೂ ಅಷ್ಟೂ ನಮಗೆ ನಿಜವಾಗಿ ಬೇಕೇ? ಎಂದು ನಮ್ಮ ಅಂತರಾತ್ಮವನ್ನು ಪ್ರಶ್ನಿಸಿಕೊಂಡಾಗ ನಿಜ ತಂತಾನೇ ಸ್ಪಷ್ಟವಾಗುತ್ತದೆ. ಕೂಡಿಟ್ಟ ಹಣ, ಕಟ್ಟಿದ ಮನೆ-ಮಠಗಳು, ಬೆಳೆಸಿದ ತೋಟ-ಜಮೀನುಗಳು, ಸಂಗ್ರಹಿಸಿದ ಆಭರಣಗಳು ಎಲ್ಲವೂ ಒಂದೇ ಪ್ರಕೃತಿಯ ವಿಕೋಪದಿಂದ - ಸುನಾಮಿ, ಭೂಕಂಪ, ಪ್ರವಾಹ, ಅಗ್ನಿ, ಬಿರುಗಾಳಿ, ದರೋಡೆ ಇತ್ಯಾದಿ - ಕ್ಷಣಮಾತ್ರದಲ್ಲಿ ನಮ್ಮ ಕಣ್ಮುಂದೆಯೇ ನಾಶವಾಗಬಹುದು.  ಹಾಗೆ ನಿರಂತರ ನಾಶವಾಗುತ್ತಿರುವುದನ್ನು ಕೂಡ ನಾವು ನಿತ್ಯ ಗಮನಿಸುತ್ತಲೇ ಇದ್ದೇವೆ. [ಜಪಾನಿನಲ್ಲಿ ಮೊನ್ನೆಯಷ್ಟೇ ಆದ ದುರಂತಕ್ಕಿಂತ ಬೇರೆ ಉದಾಹರಣೆ ಬೇಕೇ?] ಅಂದರೆ ಲೌಕಿಕವೆಲ್ಲವೂ ಅಶಾಶ್ವತ ? ಆ ಲೌಕಿಕ ಸಂಪತ್ತು-ಸವಲತ್ತುಗಳನ್ನು ನಾವೆಷ್ಟು ಪಾರಮಾರ್ಥಿಕವಾಗಿ ಪರಿಭಾವಿಸಿದ್ದೆವು ಮತ್ತು ಬಳಸಿದ್ದೆವು ಎಂಬುದಷ್ಟೇ ಮುಂದೆ ಶಾಶ್ವತವಾಗುತ್ತದೆ; ಮುಂದಿನ ಜನ್ಮಜನ್ಮಾಂತರಗಳಿಗೆ ಪ್ರಸ್ತುತವಾಗುತ್ತದೆ. ಮಳೆ ಬಂದಾಗ ಆ ಮಳೆ ನೀರು ಯಾವುದೇ ಭೇದ-ಭಾವವಿಲ್ಲದೇ ಎಲ್ಲೆಡೆ ಬೀಳುತ್ತದೆ. ಹರಿಯುವಾಗ ತನ್ನೊಡನೆ ಎಷ್ಟೊಂದು ಕೊಳೆ-ಕಸ-ಕಡ್ಡಿ ಇತ್ಯಾದಿಗಳನ್ನು ಒಯ್ಯುತ್ತದೆ. ಆದರೆ ಅದು ಒಂದು ನಿರ್ದಿಷ್ಟ ದೂರದವರೆಗೆ ಮಾತ್ರಾ. ಹರಿಯುವ ಹಾದಿಯಲ್ಲಿಯೇ ಹೊತ್ತು ತಂದ ಇಂತಹ ಅನೇಕ ಕಲ್ಮಷಗಳನ್ನು ಅದು ಸ್ವಲ್ಪ ಸ್ವಲ್ಪವೇ ವಿಸರ್ಜಿಸುತ್ತಾ ಮುಂದೆ ನದಿಯಾಗಿ ತಿಳಿಯಾದ ಶುಭ್ರ ಜಲಧಾರೆ ಪ್ರವಹಿಸುತ್ತದೆ. ನಮ್ಮ ಜೀವನ  ಕೂಡಾ ಇಂತಹ ಮಳೆ ಹರಿವಿನ ಪ್ರವಾಹದಂತಿರಬೇಕು. ಪ್ರಪಂಚಕ್ಕೆ ಕಾಲಿಟ್ಟ ಮೇಲೆ, ವ್ಯಕ್ತಿಗಳ, ವಸ್ತುಗಳ ಮತ್ತು ನಮ್ಮ ಸಂಸ್ಕಾರದ ಮತ್ತು ಸಂಪರ್ಕಗಳ ಪ್ರಭಾವದಿಂದ ನಮ್ಮ ಜೀವನಯಾತ್ರೆಯಲ್ಲಿ ಅನೇಕ ತಪ್ಪುಗಳನ್ನೆಸಗುತ್ತೇವೆ; ಅನೇಕರಿಗೆ ತೊಂದರೆ ಕೊಟ್ಟಿರುತ್ತೇವೆ ಮತ್ತು ಮಾನಸಿಕವಾಗಿ ನಾವೂ ಸಾಕಷ್ಟು ಕ್ಷೇಷಕ್ಕೊಳಗಾಗಿರುತ್ತೇವೆ. ಅರಿತೋ ಅರಿಯದೆಯೋ ಅನೇಕರ ಸಂಪರ್ಕದಿಂದ ದುಷ್ಟ ಆಚಾರ-ವಿಚಾರಗಳ ದಾಸರಾಗಿಬಿಟ್ಟಿರುತ್ತೇವೆ. ಪ್ರಾಪಂಚಿಕ ವಸ್ತುಗಳ ದುರ್ಬಳಕೆಯಿಂದ ನಮ್ಮ ಮನಸ್ಸಿಗೆ, ನಮ್ಮ ದೇಹಕ್ಕೆ ಮತ್ತು ಇಡೀ ಸಮಾಜಕ್ಕೆ ಸಾಕಷ್ಟು ಹಾನಿ ಮಾಡಿರುತ್ತೇವೆ. ಇಂತಹ ಒಂದು ಕಲ್ಮಷಗಳ ಅರಿವು ಮತ್ತು ಮಳೆ ಹರಿವಿನಂತೆ ಅಲ್ಲಲ್ಲಿಯೇ ಅವುಗಳನ್ನು (ಅಂದರೆ ಮಾಯೆಯನ್ನು)  ಬಿಟ್ಟು ಬಿಡಬೇಕೆಂಬ ಅರಿವು ಮತ್ತು ಅಂತಿಮವಾಗಿ ಹರಿವ ತಿಳಿ ನೀರಿನಂತೆ ನಮ್ಮ ಮನಸ್ಸು ಮತ್ತು ದೇಹ ಎರಡೂ ಆಗಬೇಕೆಂಬ ಅರಿವು ? ಈ ಮಾಯೆಯೆಂಬ ಪಾಶದಿಂದ ಹೊರಬರಲು ಸಹಕಾರಿ.

ಆದರೆ ಯಾವುದು ಮಾಯೆ ಎಂಬುದನ್ನು ಗುರುತಿಸುವುದೇ ಕಷ್ಟಸಾಧ್ಯವಾದ ಕೆಲಸವೆಂದರೆ ತಪ್ಪಲ್ಲ. ಉತ್ತಮ ಸಂಸ್ಕಾರ, ಉತ್ತಮ ನಡವಳಿಕೆ, ಚಿಕ್ಕಂದಿನಿಂದ ಗುರು-ಹಿರಿಯರಲ್ಲಿ ಶ್ರದ್ಧಾಭಕ್ತಿ, ಸದ್ವಿದ್ಯಾರ್ಜನೆ, ಪರೋಪಕಾರ ಬುದ್ಧಿ, ಉಪಕಾರ ಸ್ಮರಣೆ, ಕರುಣೆ, ಪರಮಾತ್ಮ ತತ್ವದಲ್ಲಿ ಅಚಂಚಲ ನಂಬಿಕೆ ಮುಂತಾದ ಉದಾತ್ತ ಗುಣಗಳು ಮಾಯಾಪಾಶಗಳನ್ನು ನಿವಾರಿಸುವಲ್ಲಿ ಪ್ರಬಲ ಅಸ್ತ್ರಗಳಾಗಬಲ್ಲವು. ಯಾವುದೇ ವಿಷಯದ ಬಗ್ಗೆ ಜಿಜ್ಞಾಸೆಗಳು, ದ್ವಂದ್ವಗಳು ಮತ್ತು ಅನಿಶ್ಚಯತೆ ಎದುರಾದಾಗ ಸೂಕ್ತ ಗುರುವಿನ ಆಸರೆ, ಸಹಾಯ, ಮಾರ್ಗದರ್ಶನ ಲಭ್ಯವಾದರೆ ಮಾಯೆಯನ್ನು ಜಯಿಸುವಲ್ಲಿ ಅದಕ್ಕಿಂತ ಬೇರೆ ಏನೂ ಹೆಚ್ಚಿನದು ಬೇಕಾಗದು. ಲೋಕದಲ್ಲಿ ಸರ್ವವ್ಯಾಪಿಯಾಗಿರುವ ಈ ಮಾಯೆಯ ಪರದೆಯನ್ನು ಸರಿಸಿ, ನಿಜ ಸತ್ಯದ, ಜೀವನಾರ್ಥದ, ಸಂಬಂಧಗಳ ಮಿಥ್ಯೆಯ ಮತ್ತು ಮೋಕ್ಷದೆಡೆಗೆ ಸಾಗುವ ಪರಿಯನ್ನೇ ಶ್ರೀ ಕೃಷ್ಣ ಅರ್ಜುನನಿಗೆ ಭಗವದ್ಗೀತೆಯಲ್ಲಿ ಲೋಕಕಲ್ಯಾಣಾರ್ಥವಾಗಿ ಪ್ರಸ್ತುತ ಪಡಿಸಿರುವುದು. ಭಗವದ್ಗೀತೆ ಮಾಯೆಯೆಂಬ ಮೋಡವನ್ನು ಸರಿಸಿ, ಬೆಳಕಿನೆಡೆಗೆ, ಜ್ಞಾನದೆಡೆಗೆ ಮತ್ತು ಪರತತ್ವ ಸಾಧನೆಯೆಡೆಗೆ ನಮ್ಮನ್ನೊಯ್ಯುವ ದಿವ್ಯ ನಾವೆ. ಆದುದರಿಂದಲೇ, ಮಾಯೆಯ ಮೋಡಿ ನಿರಂತರವಾದರೆ ಅದಕ್ಕೆ ನಾವು ಹಾಕುವ ನಿಯಂತ್ರಣ ಕ್ರಮಗಳೂ ಕೂಡ ನಿರಂತರವಾಗಿರಬೇಕು. ಇದು ದಿನನಿತ್ಯದ ನಿಲ್ಲದ ಪ್ರಕ್ರಿಯೆಯಾಗಬೇಕು. ಅದೇ ಮಾಯೆಯನ್ನು ಮೆಟ್ಟಿ ನಿಲ್ಲುವ ನಿರಂತರ ಸಾಧನೆ. ಮಾಯಾಪಾಶದಿಂದ ಬಿಡುಗಡೆ ಪಡೆವ ಹಾದಿ.

|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

ಕವಿ ವೆಂ. ಸುರೇಶ್