ಶನಿವಾರ, ಏಪ್ರಿಲ್ 23, 2011

"ಬ್ರಹ್ಮಾರ್ಪಣಂ ಬ್ರಹ್ಮಹವಿಃ"

ಬ್ರಹ್ಮಾರ್ಪಣಂ ಬ್ರಹ್ಮ ಹವಿರ್ಬ್ರಹ್ಮಾಗ್ನೌ ಬ್ರಹ್ಮಣಾ ಹುತಮ್
ಬ್ರಹ್ಮೈವ ತೇನ ಗಂತವ್ಯಂ  ಬ್ರಹ್ಮಕರ್ಮಸಮಾಧಿನಾ       ೨೪

ಬ್ರಹ್ಮ ಅರ್ಪಣಮ್  ಬ್ರಹ್ಮ ಹವಿಃ ಬ್ರಹ್ಮ ಅಗ್ನೌ ಬ್ರಹ್ಮಣಾ ಹುತಮ್
ಬ್ರಹ್ಮ ಏವ  ತೇನ ಗಂತವ್ಯಮ್   ಬ್ರಹ್ಮ ಕರ್ಮ ಸಮಾಧಿನಾ-ಅರ್ಪಣವೂ ಭಗವಂತ [ಭಗವಂತನಲ್ಲಿ ಅರ್ಪಣ]. ಅರ್ಪಿಸುವ ಹವಿಸ್ಸೂ ಭಗವಂತ[ಭಗವಂತನಾದ ಹವಿಸ್ಸು]. ಬೆಂಕಿಯ ರೂಪದಲ್ಲಿರುವ ಭಗವಂತನಲ್ಲಿ [ಭಗವದದೀನವಾದ ಬೆಂಕಿಯಲ್ಲಿ] ಭಗವಂತನಿಂದಲೆ ಹೋಮಮಾಡಿತು. ಬಗೆಯ ಏಕಾಗ್ರತೆಯ ಜತೆಗೆ ಕರ್ಮದ ವ್ಯಗ್ರತೆಯೂ ಭಗವಂತನೆ [ಭಗವಂತನ ಅಧೀನವಾದದ್ದು]

ಅಭಿಮಾನ ತ್ಯಾಗದಿಂದ ಜ್ಞಾನದ ಸ್ಥಿತಿಯಲ್ಲಿ ಕರ್ಮ ಮಾಡಿದರೆ ಹೇಗಿರುತ್ತದೆ ಎನ್ನುವುದಕ್ಕೆ ಉತ್ತರ "ಬ್ರಹ್ಮಾರ್ಪಣಂ ಬ್ರಹ್ಮಹವಿಃ" . ಇಲ್ಲಿ ಅರ್ಪಣ ಅನ್ನುವದನ್ನು ಈ ರೀತಿ ಅರ್ಥ ಮಾಡಿಕೊಳ್ಳಬಹುದು. ನಾವು ಒಂದು ಹವಿಸ್ಸನ್ನು ಅಗ್ನಿಯಲ್ಲಿ ಭಗವಂತನಿಗೆ ಅರ್ಪಣೆ ಮಾಡುತ್ತೇವೆ- ಇದು ಅರ್ಪಣೆ. ಒಬ್ಬ ಹಸಿದವನಿಗೆ ಅನ್ನ ನೀಡುತ್ತೇವೆ-ಇದು ಅರ್ಪಣೆ. ಒಬ್ಬ ಯೋಗ್ಯ ವರನಿಗೆ ಕನ್ಯಾದಾನ ಮಾಡುತ್ತೇವೆ-ಇದು ಅರ್ಪಣೆ. ಒಬ್ಬ ಹಣದ ಸಮಸ್ಯಯಲ್ಲಿದ್ದಾಗ ಆತನಿಗೆ ಸಹಾಯ ಮಾಡುತ್ತೇವೆ-ಇದು ಅರ್ಪಣೆ. ಇಲ್ಲಿ ಕೊಡುವವನೂ ಆ ಭಗವಂತ, ತೆಗೆದುಕೊಳ್ಳುವವನ ಒಳಗಿದ್ದು ಸ್ವೀಕರಿಸುವವನೂ ಅವನೇ. ಎಲ್ಲವೂ ಭಗವಂತನ ಇಚ್ಛೆಯಂತೆ ನಡೆಯುತ್ತದೆ. ಹವಿಸ್ಸು ಅಂದರೆ ಕೊಡುವ ವಸ್ತು. ಅರ್ಪಣ-ಕೊಡುವ  ಕ್ರಿಯೆ. ಯಾವ ವಸ್ತು ಕೂಡಾ ಹವಿಸ್ಸಾಗಬಹುದು. ದಾನ ದ್ರವ್ಯ ಹವಿಸ್ಸು, ಯಜ್ಞದಲ್ಲಿ ಅಗ್ನಿ ಮುಖೇನ ಅರ್ಪಿಸುವ ದ್ರವ್ಯ ಹವಿಸ್ಸು. ನಾವು ಹುಟ್ಟುವಾಗ ಏನನ್ನೂ ತೆಗೆದುಕೊಂಡು ಬಂದಿಲ್ಲ, ಎಲ್ಲವನ್ನೂ ಈ ಪ್ರಕೃತಿಯಿಂದ ಪಡೆದಿರುವುದು ಅಂದಮೇಲೆ  ನಾವು ಕೊಡುವ ಹವಿಸ್ಸು ಕೂಡಾ ಆ ಭಗವಂತನ ಅಧೀನ. ಇಲ್ಲಿ 'ನನ್ನದು' ಎನ್ನುವುದು ಹಾಸ್ಯಾಸ್ಪದ.
ಅಗ್ನಿ   ಮುಖೇನ  ನಾವು ದ್ರವ್ಯವನ್ನು ಅರ್ಪಿಸುತ್ತೇವೆ. ಇಲ್ಲಿ ಅಗ್ನಿ ಎಂದರೆ ಬರಿಯ ಜಡವಾದ ಬೆಂಕಿ ಅಲ್ಲ. ಸಂಸ್ಕೃತದಲ್ಲಿ ಅಗ್ನಿ ಎಂದರೆ ಅಗ್ನಿಯ ಅಭಿಮಾನಿ ದೇವತೆ, ಅದು  ಚೇತನ. ಈ ಕಾರಣಕ್ಕಾಗಿ ಅಗ್ನಿಯನ್ನು ಸಾಕ್ಷಿಯಾಗಿ ಬಳಸುತ್ತಾರೆ (ಉದಾ: ಅಗ್ನಿ ಸಾಕ್ಷಿಯಾಗಿ ಮದುವೆಯಾಗುವುದು). ಜಡವನ್ನು ಎಂದೂ ಸಾಕ್ಷಿಯಾಗಿ ಬಳಸಲು ಬರುವುದಿಲ್ಲ. ಈ ಅಗ್ನಿದೇವತೆಯ ಒಳಗೆ ತಾರಕ  ಶಕ್ತಿಯಾಗಿ ಆ ಭಗವಂತನಿದ್ದಾನೆ.  ಇಲ್ಲಿ ಕೊಡುವುದು, ಕೊಡತಕ್ಕದ್ದು, ಕೊಡುವ ಕ್ರಿಯೆ, ಕೊಟ್ಟಿದ್ದು ಎಲ್ಲಿಯೋ  ಎಲ್ಲವೂ ಭಗವಂತನ ಅಧೀನ. ಎಲ್ಲಾ ಕ್ರಿಯೆಯಲ್ಲಿ  ಭಗವಂತನ ಸನ್ನಿದಾನವಿದೆ. ಕೊಡತಕ್ಕ ವಸ್ತುವಿನಲ್ಲಿ ಆತನ ಸನ್ನಿದಾನವಿರುವುದರಿಂದ ಅದು ಉಪಯುಕ್ತವಾಗಿರುತ್ತದೆ. ಜ್ಞಾನ ರೂಪನಾದ ಭಗವಂತ ಅಗ್ನಿಯಲ್ಲಿ ಸನ್ನಿಹಿತನಾಗಿ ಭಕ್ತಿ ರೂಪದ ಆಹುತಿಯನ್ನು ಸ್ವೀಕರಿಸುತ್ತಾನೆ. ಈ ಅನುಸಂಧಾನದಿಂದ ನಮ್ಮ ಕ್ರಿಯೆ ನಡೆದರೆ ನಾವು ಭಗವಂತನ ಆರಾದನೆ ಮಾಡಿದಾಗ  "ಬ್ರಹ್ಮೈವ ತೇನ ಗಂತವ್ಯಂ"-ಹೋಗಿ ಸೇರುವುದೂ ಭಗವಂತನನ್ನೇ. ಏಕೆಂದರೆ "ಬ್ರಹ್ಮಕರ್ಮಸಮಾಧಿನಾ" -ಎಲ್ಲವೂ ಸರ್ವಸಮರ್ಥನಾದ ಭಗವಂತನ ಅಧೀನ.
 ಇಲ್ಲಿ ಬ್ರಹ್ಮಾರ್ಪಣ ಎಂದರೆ ಎಲ್ಲಾ ಕ್ರಿಯೆಯೂ ಭಗವಂತನಿಗೆ ಎಂದರ್ಥ. ಪ್ರಪಂಚದಲ್ಲಿರುವ ಎಲ್ಲಾ ವಸ್ತುವನ್ನು  ಸೃಷ್ಟಿಸಿದ್ದು ಆ ಭಗವಂತ. ಪ್ರಕೃತಿಯಲ್ಲಿ ಸೃಷ್ಟಿಯಾಗಿರುವುದನ್ನು ನಾವು ಉಪಯೋಗಿಸುತ್ತೇವೆ ಅಷ್ಟೆ. ಅಗ್ನಿ ಭಗವಂತನ ಅಧೀನವಾಗಿ ಕಾರ್ಯ ನಿರ್ವಹಿಸುತ್ತಾನೆ. 'ನಾವು ಮಾಡುವ ಕ್ರಿಯೆ ಆ ಭಗವಂತನ ಪ್ರೇರಣೆ. ನಾವು ಮಾಡುವ ಎಲ್ಲಾ ಕರ್ಮವೂ ಬ್ರಹ್ಮಕರ್ಮ. ಅದು ಭಗವಂತನ  ಪೂಜಾರೂಪವಾದ ಕರ್ಮ'- ಇದು ಕರ್ಮದ ಬಗ್ಗೆ ನಮಗಿರಬೇಕಾದ ಜ್ಞಾನ.ನಾವು ಮಾಡುವ ಕರ್ಮದಲ್ಲಿ ನಮ್ಮ ಸ್ವಾರ್ಥ ಇರಕೂಡದು ಅದು ಭಗವಂತನ ಪೂಜಾ ರೂಪವಾಗಿರಬೇಕು. ಯಜ್ಞ ಎಂದರೆ ಅಗ್ನಿ ಮುಖೇನ ಮಾಡುವ ಕ್ರಿಯೆ ಮಾತ್ರ ಅಲ್ಲ. ನಮ್ಮ ಬದುಕನ್ನು ಭಗವನ್ಮಯ ಮಾಡಿಕೊಂಡಾಗ ನಮ್ಮ ಜೀವನದ ಎಲ್ಲಾ ನಡೆಯೂ ಯಜ್ಞವಾಗಿಬಿಡುತ್ತದೆ. ನಮ್ಮ ಬದುಕು ಭಗವಂತನ ಚಿಂತನೆಗೆ ಮೀಸಲಾದಾಗ ನಮ್ಮ ಬದುಕೇ ಒಂದು ಮಹಾಯಜ್ಞ. ಭಗವಂತನ ಚಿಂತನೆ ಇಲ್ಲದೆ ಸ್ವಾರ್ಥದಿಂದ  ಮಾಡುವ ಅಗ್ನಿ ಮುಖೇನವಾದ  ಯಜ್ಞ ಕೇವಲ ವ್ಯಾಪಾರ.  ಪೌರೋಹಿತ್ಯ ಕೂಡಾ ಹೀಗೆ.  ತಿಳಿದು ಮಾಡಿದಾಗ ಮಾತ್ರ ಅದು ನಿಜವಾದ ಪೌರೋಹಿತ್ಯ, ಇಲ್ಲದಿದ್ದರೆ ಅದು ಕೇವಲ ದುಡ್ಡಿಗಾಗಿ ಮಾಡುವ ದಂದೆ.
ಈ ತನಕ  ಕೃಷ್ಣ ಕರ್ಮದ ಪ್ರಭೇದದ ಬಗ್ಗೆ ಹೇಳಿದ, ದೇವರ ಪೂಜಾರೂಪವಾಗಿ ಮಾಡುವ ಪ್ರತಿಯೊಂದು ಕಾರ್ಯ ಕೂಡಾ ಯಜ್ಞ ಎನ್ನುವ ವಿಚಾರ ವಿಶ್ಲೇಷಣೆ ಮಾಡಿದ. ಮುಂದೆ ಯಜ್ಞದ ಬಗ್ಗೆ ವ್ಯಾಪಕವಾದ ಅರ್ಥವನ್ನು ಕೃಷ್ಣ ವಿವರಿಸುತ್ತಾನೆ. ಹಿಂದೆ ಹೇಳಿದಂತೆ ಅಗ್ನಿ ಮುಖದಲ್ಲಿ ಮಾಡುವ ಪೂಜೆ  ಮಾತ್ರ ಯಜ್ಞವಲ್ಲ. ಕೊಡುವಿಕೆ, ಪೂಜೆಯಂತಹ ಒಳ್ಳೆಯ ಕಾರ್ಯಕ್ಕೆ ಒಂದು ಕಡೆ ಸೇರುವಿಕೆ(ಸಂಗತೀಕರಣ), ಜ್ಞಾನದಾನ, ಅನ್ನದಾನ, ನಮ್ಮಲ್ಲಿ ಹೆಚ್ಚಿಗೆ ಇರುವುದನ್ನು ಇಲ್ಲದವರಿಗೆ ಹಂಚಿ ಬದುಕುವುದು, ಎಲ್ಲವೂ ಒಂದು ಯಜ್ಞವೇ.     ಮುಂದಿನ ಶ್ಲೋಕಗಳಲ್ಲಿ ಯಜ್ಞದ ವಿಶ್ವತೋಮುಖ ಚಿತ್ರವನ್ನು ಕೃಷ್ಣ ನಮಗೆ ನೀಡುತ್ತಾನೆ.
ಸಾಮಾನ್ಯವಾಗಿ ಯಜ್ಞದಲ್ಲಿ ಎರಡು ವಿಧ. ಒಂದು ಅಂತರಂಗ ಯಜ್ಞ ಇನ್ನೊಂದು ಬಾಹ್ಯಯಜ್ಞ. ಅಂತರಂಗದಲ್ಲಿ  ಭಗವಂತನ ನಿರಂತ ಪೂಜೆ(ದೇವಪೂಜಾ); ಚಿತ್ತ-ಮನಸ್ಸು ಭಗವಂತನ ಜೊತೆಗೆ ಸೇರುವುದು(ಸಂಗತೀಕರಣ) ಮತ್ತು ನಮ್ಮನ್ನು ನಾವು ಭಗವಂತನಿಗೆ ಅರ್ಪಿಸಿಕೊಳ್ಳುವುದು ಪರಿಪೂರ್ಣವಾದ ಮಾನಸ ಯಜ್ಞ. ಇನ್ನೊಂದು ರೀತಿಯಲ್ಲಿ ಯಜ್ಞದಲ್ಲಿ ಎರಡು ಬಗೆ:  ಜ್ಞಾನಪ್ರದವಾದ ಯಜ್ಞ ಹಾಗು ಕರ್ಮಪ್ರದವಾದ ಯಜ್ಞ. ಈ ಎಲ್ಲಾ ವಿವರಣೆಯನ್ನು ಮುಂದಿನ ಶ್ಲೋಕಗಳಲ್ಲಿ ಕೃಷ್ಣ ವಿವರಿಸಿದ್ದಾನೆ.
-Shamala Janardhanan

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ